ಸಂಪಾಜೆಯಿಂದ ಕುಶಾಲನಗರದವರೆಗೆ ಅನಧಿಕೃತ ಅಂಗಡಿ, ಜಾಹೀರಾತು ಫಲಕಗಳ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಖಡಕ್ ಎಚ್ಚರಿಕೆ
ಕೊಡಗು: ರಾಷ್ಟ್ರೀಯ ಹೆದ್ದಾರಿ-275ರ ಸಂಪಾಜೆಯಿಂದ ಕುಶಾಲನಗರದ ಕಾವೇರಿ ನದಿ ಸೇತುವೆವರೆಗಿನ ರಸ್ತೆ ವ್ಯಾಪ್ತಿಯಲ್ಲಿ ಮತ್ತೆ ತಲೆ ಎತ್ತಿರುವ ಅನಧಿಕೃತ ಅಂಗಡಿ-ಮುಂಗಟ್ಟುಗಳು ಹಾಗೂ ಜಾಹೀರಾತು ಫಲಕಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ.
ಈ ಹಿಂದೆ ತೆರವುಗೊಳಿಸಲಾಗಿದ್ದ ಅನಧಿಕೃತ ಜಾಹೀರಾತು ಫಲಕಗಳು, ಹಣ್ಣಿನ ಅಂಗಡಿಗಳು ಹಾಗೂ ಗೂಡಂಗಡಿಗಳನ್ನು ಮತ್ತೆ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲೇ ಸ್ಥಾಪಿಸಿ ವ್ಯಾಪಾರ ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಅಂಗಡಿಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಫುಟ್ಪಾತ್ಗಳ ಮೇಲೆ ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುವುದರ ಜೊತೆಗೆ ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಅಲ್ಲದೆ, ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಅನಧಿಕೃತ ಅಂಗಡಿ-ಮುಂಗಟ್ಟುಗಳು ಮತ್ತು ಜಾಹೀರಾತು ಫಲಕಗಳನ್ನು ನವೆಂಬರ್ 15ರೊಳಗೆ ವ್ಯಾಪಾರಿಗಳೇ ಸ್ವಯಂ ತೆರವುಗೊಳಿಸಬೇಕು ಎಂದು ಸೂಚಿಸಲಾಗಿತ್ತು.
ಗಡುವು ಮುಗಿದ ಬಳಿಕ ನವೆಂಬರ್ 16ರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಕಾರ್ಯಾಚರಣೆ ವೇಳೆ ವ್ಯಾಪಾರಿಗಳಿಗೆ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

