ಕುಶಾಲನಗರ: ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ವಿರುದ್ಧ ಅರಕಲಗೂಡು ಜೆಡಿಎಸ್ ಶಾಸಕ ಹಾಗೂ ಮಂತರ್ ಗೌಡ ಅವರ ತಂದೆ ಎ. ಮಂಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಧರ್ಮಜ ಉತ್ತಪ್ಪ ಹಾಗೂ ಶಾಸಕ ಎ. ಮಂಜು ಮುಖಾಮುಖಿಯಾಗಿದ್ದರು. ಈ ವೇಳೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಧರ್ಮಜ ಉತ್ತಪ್ಪ ಅವರು ಆಡುಭಾಷೆಯಲ್ಲಿ ‘ಮಂತರ್ ಹೋದ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ತಮ್ಮ ಪುತ್ರ ಹಾಗೂ ಶಾಸಕರಾಗಿರುವ ಮಂತರ್ ಗೌಡ ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದಕ್ಕೆ ಕೆರಳಿದ ಎ. ಮಂಜು, ಒಬ್ಬ ಶಾಸಕರಿಗೆ ಗೌರವ ಕೊಟ್ಟು ಮಾತನಾಡಲು ಬರುವುದಿಲ್ಲವೇ ಎಂದು ಧರ್ಮಜ ಉತ್ತಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಬ್ಬರ ನಡುವಿನ ಮಾತಿನ ಚಕಮಕಿ ತೀವ್ರಗೊಂಡು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದು, ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿದ್ದಾರೆ.

