ಬೆಳ್ಳಂಬೆಳಗ್ಗೆ ಮಡಿಕೇರಿ ಸರ್ವೆ ಇಲಾಖೆಗೆ ಲೋಕಾಯುಕ್ತ ಶಾಕ್ – ಕಡತಗಳ ಪರಿಶೀಲನೆ
ಮಡಿಕೇರಿ: ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಮಡಿಕೇರಿ ತಾಲೂಕು ಸರ್ವೆ ಇಲಾಖೆಯ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಡಿಕೇರಿ ತಾಲೂಕು ಆಡಳಿತ ಭವನದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳು, ಕಚೇರಿಯಲ್ಲಿನ ವಿವಿಧ ದಾಖಲೆಗಳು ಹಾಗೂ ಕಡತಗಳನ್ನು ಪರಿಶೀಲಿಸಿದರು.
ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಕಡತಗಳ ವಿಲೇವಾರಿ ವಿಳಂಬಕ್ಕೆ ಸಂಬಂಧಿಸಿದ ದೂರುಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆಯಿಂದ ಸಿಬ್ಬಂದಿಯಲ್ಲಿ ಆತಂಕ ಮೂಡಿದೆ.

