ಕುಶಾಲನಗರ: ವಿದ್ಯಾರ್ಥಿಗಳು ಬಸ್ಗಾಗಿ ಕಾಯುವ ತಂಗುದಾಣವೇ ಇದೀಗ ಕಾಡು ಪೊದೆಗಳಿಂದ ಆವೃತವಾಗಿ ಆತಂಕದ ತಾಣವಾಗಿ ಮಾರ್ಪಟ್ಟಿದೆ. ಕುಶಾಲನಗರದಿಂದ ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಮೀಪದ ಬಸ್ ತಂಗುದಾಣದ ಸುತ್ತ ಬೆಳೆದಿರುವ ದಟ್ಟ ಪೊದೆಗಳನ್ನು ಕೂಡಲೇ ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಆಗ್ರಹಿಸಿದೆ.
ಇನ್ನರ್ ವ್ಹೀಲ್ ಕ್ಲಬ್ ಕುಶಾಲನಗರ ವತಿಯಿಂದ 2022-23ರಲ್ಲಿ ನಿರ್ಮಿಸಲಾದ ಈ ತಂಗುದಾಣ ನಿರ್ವಹಣೆಯಿಲ್ಲದೆ ದುಸ್ಥಿತಿಗೆ ತಲುಪಿದೆ. ಸುತ್ತಲೂ ಆಳೆತ್ತರಕ್ಕೆ ಬೆಳೆದಿರುವ ಗಿಡಗಂಟಿಗಳಿಂದ ತಂಗುದಾಣವೇ ಮರೆಯಾಗುತ್ತಿದ್ದು, ಒಳಭಾಗದಲ್ಲೂ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ.
ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಈ ತಂಗುದಾಣವನ್ನು ಅವಲಂಬಿಸಿದ್ದು, ದಟ್ಟ ಪೊದೆಗಳಲ್ಲಿ ಹಾವು ಸೇರಿದಂತೆ ವಿಷಜಂತುಗಳು ಆಶ್ರಯ ಪಡೆಯುವ ಆತಂಕ ಎದುರಾಗಿದೆ. ಅಲ್ಲದೆ, ಪೊದೆಗಳ ಕಾರಣದಿಂದ ತಂಗುದಾಣದಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಬಸ್ ಬರುವುದನ್ನು ಗಮನಿಸುವುದೂ ಕಷ್ಟವಾಗಿದೆ.
ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಕುಶಾಲನಗರ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ಪೊದೆಗಳನ್ನು ತೆರವುಗೊಳಿಸಿ ತಂಗುದಾಣವನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಖಜಾಂಚಿ ಅಂತೋನಿ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ, ತಾಲೂಕು ಅಧ್ಯಕ್ಷ ಕೆ.ಎಸ್. ಶಿವು, ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರು, ನಗರ ಘಟಕದ ಅಧ್ಯಕ್ಷ ಪರಮೇಶ್, ತಾಲೂಕು ಸಂಚಾಲಕ ವಿ.ಪಿ. ಚಂದ್ರಶೇಖರ್ ಹಾಗೂ ಗೌರವಾಧ್ಯಕ್ಷ ರವೀಂದ್ರ ಉಪಸ್ಥಿತರಿದ್ದರು.

