ಬೆಂಗಳೂರು
: ಕೊಡಗು ಜಿಲ್ಲೆಯಲ್ಲಿ ಅಹಿಂದ ವರ್ಗದ ಮುಖಂಡರಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ಹಾಗೂ ಸರ್ಕಾರದ ನಾಮನಿರ್ದೇಶಿತ ಹುದ್ದೆಗಳಲ್ಲಿ ಅವಕಾಶ ಕಲ್ಪಿಸುವಂತೆ ಕೊಡಗು ಜಿಲ್ಲಾ ಅಹಿಂದ ಬಳಗ ಒತ್ತಾಯಿಸಿದೆ.
ಕೊಡಗು ಅಹಿಂದ ಬಳಗದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಅವರ ನೇತೃತ್ವದ ನಿಯೋಗ ಬೆಂಗಳೂರಿನ ಸರ್ಕಾರಿ ಅತಿಥಿಗೃಹ ಕಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕೊಡಗು ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸುವ ಅಗತ್ಯತೆ ಕುರಿತು ಚರ್ಚಿಸಿದ ನಿಯೋಗ, ಜಿಲ್ಲೆಯಲ್ಲಿ ಅಹಿಂದ ವರ್ಗದವರು ರಾಜಕೀಯವಾಗಿ ಕಡೆಗಣಿಸಲ್ಪಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ. ಸರ್ಕಾರದ ನಾಮನಿರ್ದೇಶಿತ ಹುದ್ದೆಗಳು ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಅಹಿಂದ ವರ್ಗದ ಅರ್ಹ ಮುಖಂಡರಿಗೆ ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರದ ಉಳಿದ ಅವಧಿಯಲ್ಲಿ ಅಹಿಂದ ವರ್ಗದ ಅರ್ಹ ಮುಖಂಡರಿಗೆ ನಾಮನಿರ್ದೇಶಿತ ಹುದ್ದೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭ ಮೈಸೂರಿನ ಅಹಿಂದ ಮುಖಂಡ ಕೆ.ಎಸ್. ಶಿವರಾಮು, ಕರ್ನಾಟಕ ರಾಜ್ಯ ಲ್ಯಾಂಪ್ ಸೊಸೈಟಿ ಮಹಾಮಂಡಲದ ಅಧ್ಯಕ್ಷ ಅರುಣ್ ರಾವ್ ರಾಜಾರಾವ್, ಕೊಡಗು ಜಿಲ್ಲಾ ಅಹಿಂದ ಬಳಗದ ಸಂಘಟನಾ ಕಾರ್ಯದರ್ಶಿ ರವಿ ಅಜ್ಜಳ್ಳಿ, ಪ್ರಧಾನ ಕಾರ್ಯದರ್ಶಿ ಟಿ.ಈ. ಸುರೇಶ್, ಸಮಿತಿ ಸದಸ್ಯರಾದ ಕೂಡಿಗೆಯ ಮಂಜು ಹಾಗೂ ಹೊಸತೋಟದ ಕೋಯಾ ಉಪಸ್ಥಿತರಿದ್ದರು.

