ರಕ್ತದಾನ ಮಾಡಿದ್ದ ಯುವಕನಿಂದ ಈಗ ಅಂಗಾಂಗ ದಾನ – ಕುಟುಂಬದ ಮಾನವೀಯ ನಿರ್ಧಾರ.
ಎಸ್ಬಿ
ಇದು ಕೇವಲ ಒಂದು ದುರಂತದ ಕಥೆಯಲ್ಲ… ಸಾವಿನ ಹೊಸ್ತಿಲಲ್ಲೂ ಬದುಕಿಗೆ ಅರ್ಥ ತುಂಬಿದ ಮಾನವೀಯತೆಯ ಕಥೆಯಿದು.
ವಯಸ್ಸು ಕೇವಲ 22 ವರ್ಷ. ಬದುಕಿನಲ್ಲಿ ಇನ್ನೂ ಸಾಕಷ್ಟು ಕನಸುಗಳನ್ನು ಕಾಣಬೇಕಿದ್ದ, ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಿದ್ದ ಯುವಕ ಯೋಗೇಶ್ ಇಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿದ್ದು ಮಾತ್ರ ದುರಂತ.
ಶನಿವಾರ ತಡರಾತ್ರಿಯವರೆಗೂ ಮಡಿಕೇರಿ ಸಪ್ತಗಿರಿ ಎಂಟರ್ಪ್ರೈಸಸ್ತ ನ ನ್ನ ಕಚೇರಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಯೋಗೇಶ್, ದೀಪಾಲಂಕಾರ ಹಾಗೂ ಪೂಜಾ ಕಾರ್ಯಕ್ರಮದ ಸಿದ್ಧತೆಗಳನ್ನು ಉತ್ಸಾಹದಿಂದ ಪೂರ್ಣಗೊಳಿಸಿ ಮನೆಗೆ ತೆರಳಿದ್ದ. ಆದರೆ ಭಾನುವಾರ ಬೆಳಿಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದ ಯೋಗೇಶನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಯಿತು. ಮಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆಯ ಬಳಿಕ ಯೋಗೇಶ್‌ನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈಗ ಆತನನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆಯಾದರೂ ಆತ ಇನ್ಯಾವತ್ತೂ ಮರಳಲಾಗದ ಗಂಬೀರತೆಗೆ ಹೋಗಿದ್ದಾನೆ ಅನ್ನುವುದು ಕೂಡ ಇಲ್ಲಿ ಸ್ಪಷ್ಟ.
ಆದರೆ ಮಗನ ಅಗಲಿಕೆಯ ನೋವಿನ ನಡುವೆಯೂ ಯೋಗೇಶ್ ಕುಟುಂಬ ಒಂದು ಅಪರೂಪದ ಮಾನವೀಯ ನಿರ್ಧಾರವನ್ನು ಕೈಗೊಂಡಿದೆ. ತಮ್ಮ ಮನೆಯ ಯುವಕನ ಬದುಕು ಉಳಿಯದಿದ್ದರೂ, ಆತನ ಅಂಗಾಂಗಗಳ ಮೂಲಕ ಬೇರೆಯವರ ಬದುಕಿಗೆ ಬೆಳಕಾಗಲಿ ಎಂಬ ಆಶಯದೊಂದಿಗೆ ಅಂಗಾಂಗ ದಾನಕ್ಕೆ ಮುಂದಾಗಿದೆ.
ಇನ್ನೊಂದು ವಿಶೇಷವೆಂದರೆ, ಯೋಗೇಶ್ ಇತ್ತೀಚೆಗೆ ಕೆಮಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದ. ಅಂದು ತನ್ನ ರಕ್ತದ ಮೂಲಕ ಮತ್ತೊಬ್ಬರ ಜೀವ ಉಳಿಸಲು ಮುಂದಾಗಿದ್ದ ಯುವಕ, ಇಂದು ತನ್ನ ಅಂಗಾಂಗಗಳ ಮೂಲಕ ಹಲವರ ಬದುಕಿಗೆ ಆಸರೆಯಾಗುವ ಅವಕಾಶ ಸೃಷ್ಟಿಸಿದ್ದಾನೆ.
ಬದುಕಿನ ಅರ್ಥವೇ ಇತರರಿಗಾಗಿ ಬದುಕುವುದರಲ್ಲಿ ಅಡಗಿದೆ ಎಂಬುದನ್ನು ಯೋಗೇಶ್ ಮತ್ತು ಆತನ ಕುಟುಂಬ ತಮ್ಮ ನಡೆ ಮೂಲಕ ಸಾರಿದ್ದಾರೆ. ಒಂದು ಕುಟುಂಬದ ಕಣ್ಣೀರಿನ ಹಿಂದೆ ಹಲವು ಕುಟುಂಬಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ಮಹಾನ್ ನಿರ್ಧಾರ ಅಡಗಿದೆ.
ಯೋಗೇಶ್‌ನ ಬದುಕು ಅಲ್ಪಕಾಲದ್ದಾಗಿರಬಹುದು… ಆದರೆ ಆತ ಬಿಟ್ಟುಹೋಗುತ್ತಿರುವ ಮಾನವೀಯತೆಯ ಸಂದೇಶ ಮಾತ್ರ ಚಿರಕಾಲ ಉಳಿಯಲಿದೆ. ಯೋಗೇಶ್ ಬೇಗ ಗುಣಮುಖನಾಗಲಿ ಎಂಬ ಪ್ರಾರ್ಥನೆಯ ಜೊತೆಗೆ, ಈ ಕಠಿಣ ಸಂದರ್ಭದಲ್ಲಿ ಆತನ ಕುಟುಂಬದ ನೋವಿನಲ್ಲಿ ನಾವೂ ಭಾಗಿಯಾಗೋಣ.

