ಬಂಡೀಪುರದಲ್ಲಿ ಗರ್ಭಿಣಿ ಕಾಡಾನೆ ಸಾವು
ಮೃತ ಆನೆಯ ಹೊಟ್ಟೆಯಲ್ಲಿ ಮರಿಯ ಕಳೇಬರ ಪತ್ತೆ
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿಬೆಟ್ಟ ವಲಯದಲ್ಲಿ ಗರ್ಭಿಣಿ ಕಾಡಾನೆಯ ಕಳೇಬರ ಪತ್ತೆಯಾಗಿದೆ. ಮೃತ ಆನೆಯ ಹೊಟ್ಟೆಯಲ್ಲಿ ಒಂದು ವರ್ಷದ ಮರಿಯ ಕಳೇಬರವೂ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆ ನಡೆಸಿದೆ.
ಸುಮಾರು 35 ವರ್ಷ ವಯಸ್ಸಿನ ಆನೆಯ ಕಳೇಬರ ಗೋಪಾಲಸ್ವಾಮಿಬೆಟ್ಟ ವಲಯದ ಅರಣ್ಯ ಗಡಿಯಿಂದ 150 ಮೀಟರ್ ದೂರದ ಸರ್ವೆ ನಂ. 155ರಲ್ಲಿ ಪತ್ತೆಯಾಗಿದೆ.
ಮಸ್ತಿಗೆ ಬಂದಿದ್ದ ಗಂಡು ಕಾಡಾನೆಯೊಂದಿಗೆ ಮಿಲನಕ್ಕೆ ಸಮ್ಮತಿಸದ ಹಿನ್ನೆಲೆಯಲ್ಲಿ, ಅದು ಸೊಂಡಿಲಿನಿಂದ ಬೆನ್ನಿಗೆ ಬಲವಾಗಿ ಹೊಡೆದ ಪರಿಣಾಮ ಮೂಳೆ ಮುರಿದು ಆನೆ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಪ್ರಾಥಮಿಕವಾಗಿ ಶಂಕಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆರ್ಎಫ್ಒ ಸತೀಶ್ ಕುಮಾರ್, ಎಸಿಎಫ್ ಶುಭಂ ಸಿಂಗ್ ತನ್ವರ್ ಹಾಗೂ ಅರಣ್ಯ ಇಲಾಖೆಯ ಪಶುವೈದ್ಯ ಡಾ. ಮಿರ್ಜಾ ವಾಸಿಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿಯಮಾನುಸಾರ ಮರಣೋತ್ತರ ಪರೀಕ್ಷೆ ಕೈಗೊಂಡಿದ್ದಾರೆ.

