ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಸನ್ನ ಎಡಿಕೇರಿ ಸಾಂತ್ವನ
ಕುಶಾಲನಗರ: ಕೊಡಗು ಜಿಲ್ಲೆಯ ಕುಶಾಲನಗರ ಸಮೀಪ ರಾಷ್ಟ್ರೀಯ ಹೆದ್ದಾರಿ 275ರ ಆನೆಕಾಡು ಬಳಿ ಕಳೆದ ಭಾನುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಉದ್ಯಮಿ, ಸಮಾಜ ಸೇವಕ ಹಾಗೂ ಬಿಜೆಪಿ ಯುವ ನಾಯಕ ಪ್ರಸನ್ನ ಎಡಿಕೇರಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಅಪಘಾತದ ಸುದ್ದಿ ತಿಳಿದ ಹಿನ್ನೆಲೆಯಲ್ಲಿ ಮೃತರ ಮನೆಗಳಿಗೆ ತೆರಳಿದ ಪ್ರಸನ್ನ ಎಡಿಕೇರಿ, ಕುಟುಂಬಸ್ಥರೊಂದಿಗೆ ಮಾತನಾಡಿ ಅವರ ನೋವು ಹಾಗೂ ದುಃಖವನ್ನು ಆಲಿಸಿದರು. ದುಃಖದ ಈ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಧೈರ್ಯ ತುಂಬಿ, ಆತ್ಮಸ್ಥೈರ್ಯದಿಂದ ಇರುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಎಡಿಕೇರಿ, ಅಪಘಾತದಲ್ಲಿ ಅಮೂಲ್ಯ ಜೀವಗಳು ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಕುಟುಂಬಗಳ ದುಃಖದಲ್ಲಿ ತಾನೂ ಭಾಗಿಯಾಗಿದ್ದು, ಅವರ ನೋವನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಅಪಘಾತದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಂಡು ಆರೋಗ್ಯದಿಂದ ಮನೆಗೆ ಮರಳಲಿ. ಮೃತರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.

