ಕುಶಾಲನಗರದಲ್ಲಿ 84ನೇ ಇಎಂಇ ಕಾರ್ಪ್ಸ್ ಡೇ ಸಂಭ್ರಮ
53 ಮಾಜಿ ಸೈನಿಕರು ಒಂದೇ ವೇದಿಕೆಯಲ್ಲಿ ಭಾಗಿ; ಹಿರಿಯ ಯೋಧರು ಹಾಗೂ ಕ್ರೀಡಾ ಸಾಧಕ ಅಬ್ರಹಾಂಗೆ ಸನ್ಮಾನ
ಕುಶಾಲನಗರ: ಮಾಜಿ ಸೈನಿಕರ 84ನೇ ಇಎಂಇ (EME) ಕಾರ್ಪ್ಸ್ ಡೇ ಅಂಗವಾಗಿ ಕುಶಾಲನಗರದ ಪಾಮ್ ಎರಾ ರೆಸಾರ್ಟ್ನಲ್ಲಿ ಗುರುವಾರ ಸಂಭ್ರಮದ ಸಂತೋಷಕೂಟ ನಡೆಯಿತು. ಮಾಜಿ ಸೈನಿಕರ ಒಗ್ಗಟ್ಟು, ಸೇನಾ ಸೇವೆಯ ನೆನಪು ಹಾಗೂ ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಸಂಘಟಕರಾದ ಮಾಜಿ ಸೈನಿಕ ನಾಯಬ್ ಸುಬೇದಾರ್ ಪೆಮ್ಮಯ್ಯ ಅವರು ಸ್ವತಃ ನೇತೃತ್ವ ವಹಿಸಿ ಮಾಜಿ ಸೈನಿಕರನ್ನು ಒಂದೆಡೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೆಮ್ಮಯ್ಯ ಅವರು, ನಿರಂತರ ಪ್ರಯತ್ನ ಮತ್ತು ಪರಸ್ಪರ ಸಹಕಾರದ ಮೂಲಕ ಸುಮಾರು 53 ಮಾಜಿ ಯೋಧರ ಗುಂಪನ್ನು ರಚಿಸಲು ಸಾಧ್ಯವಾಗಿದೆ. ಇದು ಕೇವಲ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸೈನಿಕರ ಕುಟುಂಬದ ಸದಸ್ಯರನ್ನೂ ಒಳಗೊಂಡು ಬೃಹತ್ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ ಎಂದರು.
‘ಕರ್ಮ ಹಿ ಧರ್ಮ’ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುವ ಇಎಂಇ ಕಾರ್ಪ್ಸ್ ನಮಗೆ ಕೆಲಸವೇ ದೇವರು ಎಂಬ ಸಂದೇಶವನ್ನು ಕಲಿಸಿದೆ. ಸಕ್ರಿಯ ಸೇನಾ ಸೇವೆಯಿಂದ ನಿವೃತ್ತರಾಗಿದ್ದರೂ ನಮ್ಮಲ್ಲಿನ ಶಿಸ್ತು, ಆಲಿವ್ ಗ್ರೀನ್ ಸಮವಸ್ತ್ರದೊಂದಿಗಿನ ಭಾವನಾತ್ಮಕ ನಂಟು ಹಾಗೂ ಕಾರ್ಪ್ಸ್ನ ಬಾಂಧವ್ಯ ಇಂದಿಗೂ ನಮ್ಮನ್ನು ಒಗ್ಗೂಡಿಸಿದೆ. ಹಿರಿಯ ಸೈನಿಕರ ಈ ಒಗ್ಗಟ್ಟು ಯುವ ಪೀಳಿಗೆಗೆ ಮಾದರಿಯಾಗಬೇಕು. ಕೊಡಗಿನ ಯುವಜನತೆ ಸೇನೆಗೆ ಸೇರುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ಯೋಧರು, ಕ್ರೀಡಾ ಸಾಧಕನಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಇಎಂಇ ಕಾರ್ಪ್ಸ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 84 ವರ್ಷದ ಪೂವಯ್ಯ ಹಾಗೂ 80 ವರ್ಷದ ಸೂರಯ್ಯ ಅವರನ್ನು ಗೌರವಿಸಲಾಯಿತು.
ಅದೇ ರೀತಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ರಾಫ್ಟಿಂಗ್ ಚಾಂಪಿಯನ್ಶಿಪ್ಗಳಲ್ಲಿ ಸಾಧನೆ ಮಾಡಿರುವ, ಲೇಹ್ನಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಹಾಗೂ ಸಿಯಾಚಿನ್ ರಾಫ್ಟಿಂಗ್ ದಂಡಯಾತ್ರೆಯಲ್ಲಿ ಪಾಲ್ಗೊಂಡು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ನಿವೃತ್ತ ಸೈನಿಕ ಅಬ್ರಹಾಂ ಅವರನ್ನು ಸನ್ಮಾನಿಸಲಾಯಿತು. ಅವರ ಕ್ರೀಡಾ ಸಾಧನೆಗಳು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿಯೂ ದಾಖಲಾಗಿದ್ದು, ಸತತ ಏಳು ಬಾರಿ ಚಿನ್ನದ ಪದಕ ಸೇರಿದಂತೆ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿರುವುದು ವಿಶೇಷವಾಗಿದೆ.
ಸನ್ಮಾನ ಸ್ವೀಕರಿಸಿದವರು ಮಾತನಾಡಿ, ಮಾಜಿ ಸೈನಿಕರ ಈ ಸಂಘಟನೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಸೇನಾ ಸೇವೆಯ ನೆನಪುಗಳನ್ನು ಜೀವಂತವಾಗಿಸುವ ಸಂಘಟನೆ
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸೈನಿಕ ನಾಯಬ್ ಸುಬೇದಾರ್ ಚಿದಾನಂದ ಅವರು, ಇಎಂಇ ಕಾರ್ಪ್ಸ್ ಬೆಳೆದು ಬಂದ ಹಾದಿ ಹಾಗೂ ಸೇನಾ ಸೇವೆಯ ಅನುಭವಗಳನ್ನು ಸ್ಮರಿಸಿದರು. ನಿವೃತ್ತಿಯ ನಂತರವೂ ಸೇನೆಯಲ್ಲಿ ಸಲ್ಲಿಸಿದ ಸೇವೆಯ ಗೌರವ ಮತ್ತು ಸವಿನೆನಪುಗಳನ್ನು ಇಂತಹ ಸಂಘಟನೆಗಳು ಜೀವಂತವಾಗಿರಿಸುತ್ತವೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಮುಂದಿನ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬೇಕು ಎಂದು ಹೇಳಿದರು.
ಮಾಜಿ ಸುಬೇದಾರ್ ವೆಂಕಟೇಶ್ ಅವರ ಪತ್ನಿ ಪ್ರಮೀಳ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಬೇದಾರ್ ಲವ ಕುಮಾರ್ ವಂದಿಸಿದರು.
ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಔತಣಕೂಟ ಏರ್ಪಡಿಸಲಾಗಿತ್ತು. ಮಾಜಿ ಸೈನಿಕರ ಸ್ನೇಹ, ಒಗ್ಗಟ್ಟು ಮತ್ತು ಸೇನಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ ಈ ಸಮಾರಂಭ ಸಂಭ್ರಮದಿಂದ ನಡೆಯಿತು.

