ನಂದಿಗುಂದದಲ್ಲಿ ಕಳಪೆ ರಸ್ತೆ ಕಾಮಗಾರಿ ತಡೆದ ಕರವೇ ಸ್ವಾಭಿಮಾನಿ ಸೇನೆ–ಗ್ರಾಮಸ್ಥರು; ಲೋಕಾಯುಕ್ತಕ್ಕೆ ದೂರು
ಸೋಮವಾರಪೇಟೆ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಂದಿಗುಂದ ಗ್ರಾಮದಲ್ಲಿ KRIDL ವತಿಯಿಂದ ನಡೆಯುತ್ತಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಆರೋಪ ಕೇಳಿಬಂದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಹಾಗೂ ಗ್ರಾಮಸ್ಥರು ಕಾಮಗಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಸಂಜೆ 6 ಗಂಟೆಯ ನಂತರ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಸ್ಥಳದಲ್ಲಿ ಸಂಬಂಧಪಟ್ಟ KRIDL ಅಧಿಕಾರಿಗಳು, ಇಂಜಿನಿಯರ್ ಅಥವಾ ಗುತ್ತಿಗೆದಾರರು ಯಾರೂ ಇರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇಂಜಿನಿಯರ್ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ರಸ್ತೆ ಕಾಮಗಾರಿ ನಡೆಯುತ್ತಿರುವುದೇ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಕಾಮಗಾರಿಯಲ್ಲಿ ತಾಂತ್ರಿಕ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪವಾಗಿದೆ. ರಸ್ತೆಯ ತಳಭಾಗದಲ್ಲಿ ಪ್ಲಾಸ್ಟಿಕ್ ಶೀಟ್ ಅಳವಡಿಸದೆ, ಜಲ್ಲಿ ಹಾಸಿ ರೋಲರ್ ಮೂಲಕ ತಳಪಾಯ ಗಟ್ಟಿಗೊಳಿಸದೆ ನೇರವಾಗಿ ಮಣ್ಣಿನ ಮೇಲೆಯೇ ಕಾಂಕ್ರೀಟ್ ಸುರಿಯಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಈ ಕುರಿತು ಮಾಹಿತಿ ಪಡೆದ ಕರವೇ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಮೇಲ್ವಿಚಾರಣೆ ಇಲ್ಲದೆ ನಡೆಯುತ್ತಿದ್ದ ಕಾಮಗಾರಿಯನ್ನು ಸ್ಥಳದಲ್ಲೇ ತಡೆದು ನಿಲ್ಲಿಸಿದ್ದಾರೆ.
ಈಗಾಗಲೇ ಮಣ್ಣಿನ ಮೇಲೆ ಹಾಕಿರುವ ಕಾಂಕ್ರೀಟ್ ತೆರವುಗೊಳಿಸಿ, ನಿಯಮಾನುಸಾರ ತಳಪಾಯ ಸಿದ್ಧಪಡಿಸಿ, ಗುಣಮಟ್ಟದ ಜಲ್ಲಿ ಹಾಗೂ ಸಿಮೆಂಟ್ ಬಳಸಿ ರಸ್ತೆ ಮರುನಿರ್ಮಾಣ ಮಾಡಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಕಾಮಗಾರಿಯಲ್ಲಿ ಗುಣಮಟ್ಟ ಮತ್ತು ನಿಯಮ ಪಾಲನೆ ಕಡ್ಡಾಯವಾಗಬೇಕು. ಕಾಮಗಾರಿಯಲ್ಲಿ ಅಕ್ರಮ ಅಥವಾ ಅವ್ಯವಹಾರ ನಡೆದಿರುವುದು ತನಿಖೆಯಿಂದ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಂದಿಗುಂದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಲು ನಿರ್ಧರಿಸಿರುವುದಾಗಿ ಫ್ರಾನ್ಸಿಸ್ ಡಿಸೋಜ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

