ಹಾರಂಗಿ ಜಲಾಶಯದ ಸೇತುವೆಯಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆ: ಸ್ಥಳೀಯರಿಂದ ಕ್ರಮಕ್ಕೆ ಆಗ್ರಹ
ಹಾರಂಗಿ: ಹಾರಂಗಿ ಜಲಾಶಯದ ಮುಂಭಾಗದ ಸೇತುವೆಯಲ್ಲಿ ಪ್ರವಾಸಿಗರು ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ಸೋಮವಾರಪೇಟೆ–ಕುಶಾಲನಗರ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸೇತುವೆ ಈಗಾಗಲೇ ಇಕ್ಕಟ್ಟಾದ ಹಾಗೂ ಅಪಾಯಕಾರಿಯಾದ ಪ್ರದೇಶವಾಗಿದ್ದು, ಅದರ ಮೇಲೆಯೇ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದರಿಂದ ಅಪಘಾತ ಸಂಭವಿಸುವ ಆತಂಕವೂ ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರು ವಾಹನಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದಾಗ ಕೆಲ ಪ್ರವಾಸಿಗರು ವಾಗ್ವಾದಕ್ಕೆ ಇಳಿಯುತ್ತಿರುವುದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಮೇಲೆ ವಾಹನ ನಿಲುಗಡೆಗೆ ನಿರ್ಬಂಧ ಹೇರಿ, ಸಂಚಾರ ಸುಗಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಾರಂಗಿಯ ಸಜನ್ ಕಿಶೋರ್ ಬೊಳ್ತಂಡ ಆಗ್ರಹಿಸಿದ್ದಾರೆ.


