ಸಾಣೂರಿನಲ್ಲಿ ಅಪಘಾತ; ಆಪ್ತ ಸಹಾಯಕನಿಗೆ ಕಾಲು ಮುರಿತ

ಕಾರ್ಕಳ–ಮೂಡುಬಿದಿರೆ ರಸ್ತೆಯ ಸಾಣೂರು ಗ್ರಾಮದ ವ್ಯಾಪ್ತಿಯಲ್ಲಿ ಮಾಜಿ ಸಚಿವ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ವಿಶಾಲ್ ಕಂಪನಿಯ ಬಸ್ ನಡುವೆ ಭಾನುವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ.

ಮಧ್ಯಾಹ್ನ ಸುಮಾರು 3.30ರ ವೇಳೆಗೆ ಘಟನೆ ನಡೆದಿದ್ದು, ರಮಾನಾಥ ರೈ ಅವರು ತಮ್ಮ ಆಪ್ತ ಸಹಾಯಕ ಡೆನ್ಜೆಲ್ ಅವರೊಂದಿಗೆ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಅಪಘಾತದಲ್ಲಿ ಡೆನ್ಜೆಲ್ ಅವರ ಬಲಗಾಲಿಗೆ ಮುರಿತವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನೆಪೊಯಾ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಇತರರಿಗೆ ಯಾವುದೇ ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version