ಸಂಪಿಗೆಕಟ್ಟೆ ಮಹದೇವಪೇಟೆ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಭಾಗ್ಯ

ಹಲವು ವರ್ಷಗಳ ಬಳಿಕ ₹85 ಲಕ್ಷ ವೆಚ್ಚದಲ್ಲಿ ನೂತನ ರಸ್ತೆ ನಿರ್ಮಾಣ ಆರಂಭ

ಮಡಿಕೇರಿ: ನಗರದ ಮಡಿಕೇರಿಯ ಸಂಪಿಗೆಕಟ್ಟೆ –ಮಹದೇವಪೇಟೆ ಸಂಪರ್ಕ ರಸ್ತೆಯ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಹಲವು ವರ್ಷಗಳಿಂದ ರಸ್ತೆ ದುರಸ್ತಿಗಾಗಿ ಎದುರು ನೋಡುತ್ತಿದ್ದ ಸ್ಥಳೀಯರಿಗೆ ಇದೀಗ ಹೊಸ ರಸ್ತೆ ನಿರ್ಮಾಣದ ಮೂಲಕ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.

ಸುಮಾರು ₹85 ಲಕ್ಷ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಕೆಲ ದಿನಗಳ ಹಿಂದೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾಮಗಾರಿ ಪ್ರಗತಿಯನ್ನು ನಗರಸಭೆ ಇಂಜಿನಿಯರ್, ಸಂಪಿಗೆಕಟ್ಟೆ ಯುವಕ ಸಂಘದ ಈ.ಕೆ. ಶಶಿಧರನ್, ಕಾಂಗ್ರೆಸ್ ಬೂತ್ ಅಧ್ಯಕ್ಷ ರಿಯಾಝುದ್ದೀನ್ ಸೇರಿದಂತೆ ಸ್ಥಳೀಯರು ಪರಿಶೀಲಿಸಿದರು.

ಮಡಿಕೇರಿ ದಸರಾ ಉತ್ಸವಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ. ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದ್ದು, ಪರ್ಯಾಯ ಮಾರ್ಗದ ಮೂಲಕ ವಾಹನಗಳು ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ.

Exit mobile version