ಹವಾಮಾನ ಬದಲಾವಣೆ ಎದುರಿಸಲು ಜನರ ಸಹಭಾಗಿತ್ವ ಅನಿವಾರ್ಯ: ಬಿದ್ದಂಡ ಬಿ. ಮಾದಯ್ಯ

ಮಡಿಕೇರಿ: ಕಾವೇರಿ ನದಿ ಹಾಗೂ ಅದರ ಜಲಾನಯನ ಪ್ರದೇಶದ ಭವಿಷ್ಯದ ನೀರಿನ ಭದ್ರತೆಯನ್ನು ಕಾಪಾಡಲು ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ಮತ್ತು ವ್ಯಾಪಕವಾಗಿ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಆದ್ಯತೆ ನೀಡಬೇಕಿದೆ ಎಂದು ನಿವೃತ್ತ ಮುಖ್ಯ ಇಂಜಿನಿಯರ್ ಬಿದ್ದಂಡ ಬಿ.ಮಾದಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ನ್ಯೂಸ್ ಗೆ ವಿಶೇಷ ಲೇಖನ ಬರೆದಿರುವ ಅವರು ತಲಕಾವೇರಿಯಲ್ಲಿ ಉಗಮಿಸಿ ಬಂಗಾಳಕೊಲ್ಲಿಯನ್ನು ಸೇರುವ ಕಾವೇರಿ ನದಿ ಕರ್ನಾಟಕ ಹಾಗೂ ತಮಿಳುನಾಡಿನ ಕೋಟ್ಯಂತರ ಜನರ ಜೀವನಾಧಾರವಾಗಿದೆ. ಸುಮಾರು 81,155 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಲವು ಪ್ರಮುಖ ಹಾಗೂ ಸಣ್ಣ ಉಪನದಿಗಳು ಕಾವೇರಿಯನ್ನು ಸೇರುತ್ತವೆ. ಹೀಗಾಗಿ ನದಿ ಸಂರಕ್ಷಣೆಯೊಂದಿಗೆ ಇಡೀ ಜಲಾನಯನ ಪ್ರದೇಶದ ನೀರಿನ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.

ಹವಾಮಾನ ಬದಲಾವಣೆಯಿಂದ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಯ ಸ್ವರೂಪದಲ್ಲಿಯೂ ಬದಲಾವಣೆ ಕಂಡುಬರುತ್ತಿದೆ. ಅಲ್ಪಾವಧಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿದು ಹಠಾತ್ ಪ್ರವಾಹ ಉಂಟಾಗುವುದು ಒಂದೆಡೆಯಾದರೆ, ಮತ್ತೊಂದೆಡೆ ದೀರ್ಘಾವಧಿಯ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಭಾರಿ ಮಳೆಯ ನೀರು ವೇಗವಾಗಿ ನದಿಗಳ ಮೂಲಕ ಸಮುದ್ರ ಸೇರುವುದರಿಂದ ಅದನ್ನು ಭೂಮಿಯಲ್ಲಿ ಸಂಗ್ರಹಿಸಿ ಅಂತರ್ಜಲ ಮರುಪೂರಣಕ್ಕೆ ಬಳಸಿಕೊಳ್ಳುವ ಅಗತ್ಯವಿದೆ ಎಂದುಮಾದಯ್ಯ ತಿಳಿಸಿದ್ದಾರೆ.

ಅಂತರ್ಜಲ ಸಂರಕ್ಷಣೆ ಮುಖ್ಯ

ಅತಿಯಾದ ಅಂತರ್ಜಲ ಬಳಕೆಯಿಂದ ಹಲವು ಪ್ರದೇಶಗಳಲ್ಲಿ ಭೂಗರ್ಭಜಲ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಮಟ್ಟ ಉತ್ತಮವಾಗಿದ್ದರೆ ನದಿಗಳಿಗೂ ದೀರ್ಘಕಾಲ ನೀರಿನ ಹರಿವು ಮುಂದುವರಿಯಲು ಸಾಧ್ಯವಾಗುತ್ತದೆ. ಹೀಗಾಗಿ ಮಳೆನೀರನ್ನು ಸಾಧ್ಯವಾದಷ್ಟು ಭೂಮಿಗೆ ಇಂಗಿಸುವ ವ್ಯವಸ್ಥೆಗಳನ್ನು ಸ್ಥಳೀಯ ಮಟ್ಟದಲ್ಲೇ ರೂಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕಾಫಿ ಸೇರಿದಂತೆ ವಿವಿಧ ತೋಟಗಳಲ್ಲಿ ಟ್ರೆಂಚ್‌ಗಳನ್ನು ನಿರ್ಮಿಸುವುದು, ಖಾಲಿ ಜಾಗಗಳಲ್ಲಿ ಸಣ್ಣ ಗುಂಡಿ ಹಾಗೂ ನೀರು ಇಂಗಿಸುವ ವ್ಯವಸ್ಥೆಗಳನ್ನು ರೂಪಿಸುವುದು, ಬಳಕೆಯಲ್ಲಿಲ್ಲದ ಬೋರ್‌ವೆಲ್‌ಗಳನ್ನು ವೈಜ್ಞಾನಿಕವಾಗಿ ಮಳೆನೀರಿನಿಂದ ರೀಚಾರ್ಜ್ ಮಾಡುವುದು, ಬಾವಿಗಳಿಗೆ ಫಿಲ್ಟರ್ ಮೂಲಕ ಮೇಲ್ಛಾವಣಿಯ ನೀರನ್ನು ಹರಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಕೆರೆಗಳನ್ನು ನಿರ್ಮಿಸುವುದು, ಬಳಕೆಯಾಗದ ತೇವ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಿಸುವುದು ಹಾಗೂ ಶಾಲಾ-ಕಾಲೇಜುಗಳ ಮೈದಾನಗಳಲ್ಲಿ ಸಂಗ್ರಹವಾಗುವ ನೀರನ್ನು ಸಮೀಪದ ಸಣ್ಣ ಕೆರೆಗಳಿಗೆ ಹರಿಸುವಂತಹ ಕ್ರಮಗಳನ್ನೂ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಕೊಡಗಿನಲ್ಲಿ ವಿಶೇಷ ಯೋಜನೆ ಅಗತ್ಯ

ಕೊಡಗಿನಲ್ಲಿ ಹಿಂದೆ ರೈತರಿಗೆ ನೀರಿನ ಸಂಗ್ರಹಣೆಗೆ ಸಹಾಯವಾಗುವ ರೀತಿಯಲ್ಲಿ ದೊಡ್ಡ ಗಾತ್ರದ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿಕೊಡುವ ಯೋಜನೆಗಳಿದ್ದವು. ಕೆಲವು ಕಾಫಿ ತೋಟಗಳಲ್ಲಿ ಟ್ರೆಂಚ್‌ಗಳನ್ನೂ ನಿರ್ಮಿಸಲಾಗಿತ್ತು. ಇಂತಹ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಮಳೆನೀರನ್ನು ಸಂಗ್ರಹಿಸಿ ಅಂತರ್ಜಲ ಮರುಪೂರಣಕ್ಕೆ ಬಳಸಿಕೊಳ್ಳಬಹುದು ಎಂದುಮಾದಯ್ಯ ಅಭಿಪ್ರಾಯಪಟ್ಟಿದ್ದಾರೆ.

ರೈತರು ತಮ್ಮ ಜಮೀನಿನಲ್ಲಿ ಮಳೆನೀರು ಸಂಗ್ರಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದ ವತಿಯಿಂದ ಜೆಸಿಬಿ, ಆಪರೇಟರ್ ಹಾಗೂ ಡೀಸೆಲ್‌ ನೆರವು ನೀಡುವಂತಹ ಯೋಜನೆಗಳನ್ನು ರೂಪಿಸಬಹುದು. ಇಂತಹ ಕ್ರಮಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಜೊತೆಗೆ ಭವಿಷ್ಯದ ನೀರಿನ ಭದ್ರತೆಗೂ ನೆರವಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಮರಗಳ ಸಂರಕ್ಷಣೆಗೆ ಒತ್ತು

ಮಳೆನೀರು ಸಂಗ್ರಹಣೆಯ ಜೊತೆಗೆ ಅರಣ್ಯ ಮತ್ತು ಮರಗಳ ಸಂರಕ್ಷಣೆಯೂ ಅತ್ಯಂತ ಮುಖ್ಯವಾಗಿದೆ. ಮರಗಳು ಇಂಗಾಲದ ಡೈಆಕ್ಸೈಡ್‌ ಹೀರಿಕೊಳ್ಳುವ ಮೂಲಕ ಪರಿಸರ ಸಮತೋಲನಕ್ಕೆ ನೆರವಾಗುತ್ತವೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಬೆಳೆಸುವ ಮತ್ತು ಈಗಿರುವ ಮರಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಸರ್ಕಾರ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಅಭಿಯಾನಗಳನ್ನು ನಡೆಸಲಾಗಿದೆ ಎಂಬುದನ್ನು ಉಲ್ಲೇಖಿಸಿರುವ ಅವರು, ಇದೇ ರೀತಿಯಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕರ್ನಾಟಕದಲ್ಲಿಯೂ ವ್ಯಾಪಕ ಹಸಿರು ಅಭಿಯಾನಗಳನ್ನು ರೂಪಿಸಬಹುದು ಎಂದು ಹೇಳಿದ್ದಾರೆ.

“ನಮ್ಮ ಪಾಲಿನ ಕೆಲಸ ಈಗಲೇ ಆರಂಭಿಸೋಣ”

ನೀರಿನ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬ ನಾಗರಿಕರೂ ತಮ್ಮ ವ್ಯಾಪ್ತಿಯಲ್ಲಿ ಮಳೆನೀರನ್ನು ಸಂಗ್ರಹಿಸಿ, ಭೂಮಿಗೆ ನೀರನ್ನು ಇಂಗಿಸುವ ಕಾರ್ಯಕ್ಕೆ ಮುಂದಾಗಬೇಕು. ಶಾಲೆಗಳು, ಕಾಲೇಜುಗಳು, ಸಂಘ-ಸಂಸ್ಥೆಗಳು, ಕೊಡವ ಸಮಾಜಗಳು, ರೈತರು ಹಾಗೂ ಸಾರ್ವಜನಿಕರು ಒಟ್ಟಾಗಿ ಸ್ಥಳೀಯ ಮಟ್ಟದಲ್ಲಿ ಮಳೆನೀರು ಕೊಯ್ಲು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಬಿದ್ದಂಡ ಬಿ.ಮಾದಯ್ಯ ಮನವಿ ಮಾಡಿದ್ದಾರೆ.

“ನಮ್ಮ ಪಾಲಿನ ಕೆಲಸವನ್ನು ನಾವು ಈಗಲೇ ಆರಂಭಿಸೋಣ. ಇಂದು ಸಂಗ್ರಹಿಸುವ ಮಳೆನೀರು ನಾಳಿನ ನೀರಿನ ಭದ್ರತೆಗೆ ಆಧಾರವಾಗಲಿದೆ” ಎಂದು ಅವರು ಹೇಳಿದ್ದಾರೆ.

Exit mobile version