ದುಬೈ ದಸರಾ ಕಪ್ ಫುಟ್ಬಾಲ್- ಕೂರ್ಗ್ ಯುನೈಟೆಡ್ ಎಫ್ಸಿ ತಂಡ ಚಾಂಪಿಯನ್-ಉಳ್ಳಾಲ ಗಾಯ್ಸ್ ರನ್ನರ್ಸ್
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ನಾಡ ಹಬ್ಬ ಅರಬ್ ನಾಡಿನಲ್ಲಿ ಎಂಬ ದ್ಯೇಯ ವಾಕ್ಯದೊಂದಿಗೆ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದುಬೈ ದಸರಾ ಕ್ರೀಡೋತ್ಸವದ ಭಾಗವಾದ ಕರ್ನಾಟಕ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಅನಿವಾಸಿ ಕೊಡಗಿನ ಯುವಕರು ಜಯ ಸಾಧಿಸಿ ಏಳನೇ ವರ್ಷದ ಚಾಂಪಿಯನ್ ಆಗಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ದುಬೈನಲ್ಲಿರುವ ಎಥಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ
ಬಲಿಷ್ಠ ಉಳ್ಳಾಲ ಗಾಯ್ಸ್ ತಂಡವನ್ನು ಪೆನಾಲ್ಟಿ ಶೂಟ್ಔಟ್ ನಲ್ಲಿ ಕೂರ್ಗ್ ಯುನೈಟೆಡ್ ಎಫ್ಸಿ ದುಬೈ ತಂಡವು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಉಳ್ಳಾಲ ಗಾಯ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕೊಡಗಿನ ಯುನೈಟೆಡ್ ಎಫ್ಸಿ ತಂಡದ ನಾಯಕನಾಗಿ ರಫೀಕಲಿ ಕುಂಜಿಲ ಅವರು ಮುನ್ನೆಡೆಸಿದರೆ ತಂಡದಲ್ಲಿ ಆಟಗಾರರಾಗಿ ಜಿಲ್ಲೆಯ ಆಸಿಫ್ ಕುಂಜಿಲ, ಅಫ್ರೀದ್ ಹೊಸಕೋಟೆ, ಜಾಫರ್ ಕಡಂಗ, ಆರಿಫ್ ಕುಂಜಿಲ, ಅಫ್ರಿದ್ ಸುಂಟಿಕೊಪ್ಪ, ತಬಶೀರ್ ಕುಂಜಿಲ, ರಾಝಿಕ್ ಸುಂಟಿಕೊಪ್ಪ, ಶುಹೈಬ್ ಕೊಟ್ಟಮುಡಿ ಇದ್ದರೆ ಶಂಸಿ ಚಾಮಿಯಾಲ ಅವರು ಗೋಲ್ ಕೀಪರ್ ಆಗಿ ಕಾರ್ಯ ನಿರ್ವಹಿಸಿ ತಂಡವನ್ನು ಪ್ರಶಸ್ತಿ ಗೆಲ್ಲುವತ್ತ ತಮ್ಮ ಉತ್ತಮ ಆಟದ ಕೊಡುಗೆ ನೀಡಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಪ್ರತಿಷ್ಠಿತ ದುಬೈ ದಸರಾ ಚಾಂಪಿಯನ್ಸ್ ಟ್ರೋಫಿ, ಮೆಡಲ್ ಮತ್ತು ಸರ್ಟಿಫಿಕೇಟ್ ವಿತರಿಸಲಾಯಿತು. ಈ ಸಂದರ್ಭ ದುಬೈ ಕನ್ನಡಿಗ ಸಂಘದ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಕಡೆಗಳ ಆನಿವಾಸಿ ಪ್ರವಾಸಿಗಳು, ಕ್ರೀಡಾಭಿಮಾನಿಗಳು ಹಾಜರಿದ್ದರು.


