ವಾಟ್ಸಾಪ್, ಫೇಸ್‌ಬುಕ್‌ನಲ್ಲಿ 80ರ ದಶಕದ ಫೋಟೋಗಳದ್ದೇ ಹವಾ

ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚುತ್ತಿದ್ದಾರೆ

ಸುರೇಶ್ ಬಿಳಿಗೇರಿ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಹುಟ್ಟಿಕೊಳ್ಳುವುದು ಸಾಮಾನ್ಯ. ಆದರೆ ಇದೀಗ ವಾಟ್ಸಾಪ್ , ಇನ್ಸ್ಟಾ ಹಾಗೂ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ 80ರ ದಶಕದ ಫೋಟೋಗಳ ಟ್ರೆಂಡ್ ಮಾತ್ರ ಎಲ್ಲರ ಗಮನ ಸೆಳೆಯುತ್ತಿದೆ.

ಕೊಡಗಿನಲ್ಲೂ ಈ ಟ್ರೆಂಡ್ ಜೋರಾಗಿದ್ದು, ಸಾವಿರಾರು ಮಂದಿ ತಮ್ಮ ಫೋಟೋಗಳನ್ನು 80ರ ದಶಕದ ಶೈಲಿಯಲ್ಲಿ ಪರಿವರ್ತಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್ ಖಾತೆಗಳನ್ನು ತೆರೆದರೆ ಒಂದು ಕಡೆ ಹಳೆಯ ಕಾಲದ ಉಡುಪು, ಮತ್ತೊಂದು ಕಡೆ ಅಂದಿನ ಕೇಶವಿನ್ಯಾಸ, ಇನ್ನೊಂದೆಡೆ 80ರ ದಶಕದ ವಾತಾವರಣವನ್ನು ಹೋಲುವ ಹಿನ್ನೆಲೆ—ಹೀಗೆ ಎಲ್ಲೆಡೆ 80ರ ದಶಕವೇ ಕಂಗೊಳಿಸುತ್ತಿದೆ.

ಇದಕ್ಕೆ ಕಾರಣವಾಗಿರುವುದು ಕೆಲವು AI ಆಧಾರಿತ ಫೋಟೋ ಎಡಿಟಿಂಗ್ ಆ್ಯಪ್‌ಗಳು. ಈಗಿನ ಕಾಲದ ನಮ್ಮ ಫೋಟೋವನ್ನು ಆ್ಯಪ್‌ಗೆ ಅಪ್‌ಲೋಡ್ ಮಾಡಿದರೆ ಸಾಕು. ಕೆಲವೇ ಕ್ಷಣಗಳಲ್ಲಿ ಅದೇ ವ್ಯಕ್ತಿ 80ರ ದಶಕದಲ್ಲಿ ಇದ್ದಿದ್ದರೆ ಹೇಗೆ ಕಾಣುತ್ತಿದ್ದರು ಎಂಬ ಕಲ್ಪನೆಯ ಚಿತ್ರ ಸಿದ್ಧವಾಗುತ್ತದೆ.

ಹಳೆಯ ಕಾಲದ ಬಟ್ಟೆ, ಕೇಶವಿನ್ಯಾಸ, ಫೋಟೋಗಳ ಗುಣಮಟ್ಟ, ಬಣ್ಣ ಹಾಗೂ ಅಂದಿನ ಕಾಲದ ವಾತಾವರಣವನ್ನು ಹೋಲುವ ಹಿನ್ನೆಲೆಯೊಂದಿಗೆ ಚಿತ್ರಗಳು ಸಿದ್ಧವಾಗುತ್ತಿರುವುದರಿಂದ, ಅವುಗಳನ್ನು ನೋಡಿದವರಿಗೆ ಕೆಲವೊಮ್ಮೆ ಇದು ನಿಜವಾದ ಹಳೆಯ ಫೋಟೋವೇ ಎಂಬ ಅನುಮಾನವೂ ಮೂಡುತ್ತಿದೆ.

ತಮ್ಮದೇ ಫೋಟೋವನ್ನು 80ರ ದಶಕದ ಲುಕ್‌ನಲ್ಲಿ ಕಂಡ ಜನರು ಅದನ್ನು ತಮ್ಮ ಫೇಸ್‌ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಸ್ನೇಹಿತರು, ಸಂಬಂಧಿಕರು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಂತೆ ಮತ್ತಷ್ಟು ಮಂದಿ ಇದೇ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ.

ವಾಟ್ಸಾಪ್ ಸ್ಟೇಟಸ್‌ನಲ್ಲೂ 80ರ ದಶಕ

ಫೇಸ್‌ಬುಕ್‌ಗೆ ಮಾತ್ರ ಈ ಟ್ರೆಂಡ್ ಸೀಮಿತವಾಗಿಲ್ಲ. ವಾಟ್ಸಾಪ್ ಸ್ಟೇಟಸ್‌ಗಳಲ್ಲೂ 80ರ ದಶಕದ ಫೋಟೋಗಳು ರಾರಾಜಿಸುತ್ತಿವೆ. ಬೆಳಗ್ಗೆಯಿಂದ ರಾತ್ರಿ ತನಕ ಸ್ಟೇಟಸ್‌ಗಳಲ್ಲಿ ಒಂದಾದ ಮೇಲೊಂದರಂತೆ ಇಂತಹ ಚಿತ್ರಗಳು ಕಾಣಿಸಿಕೊಳ್ಳುತ್ತಿವೆ.

ಒಬ್ಬರು ತಮ್ಮ ಫೋಟೋ ಹಾಕಿದರೆ, ಅದನ್ನು ನೋಡಿದ ಮತ್ತೊಬ್ಬರು ತಮ್ಮ ಫೋಟೋ ಮಾಡಿಸಿ ಹಾಕುತ್ತಿದ್ದಾರೆ. ಹೀಗೆ ಸ್ನೇಹಿತರ ವಲಯದಿಂದ ಕುಟುಂಬದವರವರೆಗೆ ಈ ಟ್ರೆಂಡ್ ಹರಡುತ್ತಿದೆ.

ಅಚ್ಚರಿ ಮೂಡಿಸುತ್ತಿರುವ ಮತ್ತೊಂದು ಸಂಗತಿ

ಈ ಟ್ರೆಂಡ್‌ನಲ್ಲಿ ಗಮನ ಸೆಳೆಯುತ್ತಿರುವ ಪ್ರಮುಖ ಅಂಶವೆಂದರೆ 80ರ ದಶಕದಲ್ಲಿ ಜನಿಸದವರೇ ಹೆಚ್ಚಿನ ಸಂಖ್ಯೆಯಲ್ಲಿ 80ರ ದಶಕದ ಫೋಟೋಗಳನ್ನು ಮಾಡಿಸಿಕೊಂಡು ಹಂಚಿಕೊಳ್ಳುತ್ತಿರುವುದು. ಅಂದಿನ ಕಾಲವನ್ನು ನೋಡದ, ಅನುಭವಿಸದ ಯುವಜನರು ಇಂದು ತಮ್ಮನ್ನು ತಾವು 80ರ ದಶಕದ ವ್ಯಕ್ತಿಗಳಂತೆ ಕಲ್ಪಿಸಿಕೊಂಡು ಫೋಟೋಗಳನ್ನು ತಯಾರಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಜೆನ್‌ Z ಬಳಗ ಈ ಟ್ರೆಂಡ್‌ಗೆ ಹೆಚ್ಚು ಆಕರ್ಷಿತವಾಗಿರುವುದು ಗಮನಾರ್ಹ.

ಅಂದಿನ ಕಾಲದ ಜೀವನಶೈಲಿ, ಉಡುಪು, ಹೇರ್‌ಸ್ಟೈಲ್‌, ಹಳೆಯ ಫೋಟೋಗಳ ಲುಕ್‌ ಮತ್ತು ರೆಟ್ರೋ ವಾತಾವರಣದ ಬಗ್ಗೆ ಯುವಜನರಲ್ಲಿ ಮೂಡಿರುವ ಕುತೂಹಲವೂ ಇದಕ್ಕೆ ಒಂದು ಕಾರಣ ಎನ್ನಬಹುದು.

ಹಳೆಯ ಕಾಲದ ನೆನಪು… ಹೊಸ ತಂತ್ರಜ್ಞಾನದ ಕಮಾಲ್

ಒಂದು ಕಾಲದಲ್ಲಿ 80ರ ದಶಕದ ಫೋಟೋ ಪಡೆಯಬೇಕಾದರೆ ನಿಜವಾಗಿಯೂ ಆ ಕಾಲದಲ್ಲೇ ತೆಗೆದ ಚಿತ್ರ ಇರಬೇಕಿತ್ತು. ಆದರೆ ಇಂದು ತಂತ್ರಜ್ಞಾನ ಅದನ್ನೇ ಕೆಲವೇ ಸೆಕೆಂಡುಗಳಲ್ಲಿ ಕಲ್ಪಿಸಿಕೊಡುತ್ತಿದೆ.

ಹೀಗಾಗಿ 80ರ ದಶಕವನ್ನು ಕಂಡವರು ತಮ್ಮ ಹಳೆಯ ನೆನಪುಗಳನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದರೆ, ಆ ಕಾಲದಲ್ಲಿ ಹುಟ್ಟದವರು “ನಾವು ಆಗ ಹೇಗಿದ್ದಿರಬಹುದು?” ಎಂಬ ಕುತೂಹಲವನ್ನು ತೀರಿಸಿಕೊಳ್ಳುತ್ತಿದ್ದಾರೆ.

ಕೊಡಗಿನ ಸಾಮಾಜಿಕ ಜಾಲತಾಣಗಳಲ್ಲೂ ಇದೇ ಟ್ರೆಂಡ್ ಮುಂದುವರಿದಿದ್ದು, ಫೇಸ್‌ಬುಕ್ ಪೋಸ್ಟ್‌ಗಳಿಂದ ಹಿಡಿದು ವಾಟ್ಸಾಪ್ ಸ್ಟೇಟಸ್‌ಗಳವರೆಗೆ 80ರ ದಶಕದ ಫೋಟೋಗಳದ್ದೇ ಹವಾ.

ಒಟ್ಟಿನಲ್ಲಿ, 80ರ ದಶಕವನ್ನು ನೋಡದವರೇ ಇಂದು 80ರ ದಶಕಕ್ಕೆ ‘ಹಿಂತಿರುಗಿ’ ಹೋಗುತ್ತಿದ್ದಾರೆ. ತಂತ್ರಜ್ಞಾನ ಸೃಷ್ಟಿಸಿರುವ ಈ ರೆಟ್ರೋ ಲೋಕ ಸದ್ಯಕ್ಕೆ ಕೊಡಗಿನ ಸಾಮಾಜಿಕ ಜಾಲತಾಣ ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Exit mobile version