ಮಡಿಕೇರಿ: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಪೊಲೀಸ್ ಸಂಸ್ಮರಣಾ ದಿನಾಚರಣೆಯನ್ನು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಆಚರಿಸಲಾಯಿತು.

ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಸೇರಿದಂತೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಕಾನೂನು ಸುವ್ಯವಸ್ಥೆ ಕಾಪಾಡುವುದು, ನಾಗರಿಕರ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸುವುದು, ಅಪರಾಧಗಳನ್ನು ತಡೆಗಟ್ಟುವುದು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಪ್ರಮುಖ ಕರ್ತವ್ಯಗಳಾಗಿವೆ ಎಂದರು. ಪ್ರಾಕೃತಿಕ ವಿಕೋಪ ಹಾಗೂ ಚುನಾವಣೆಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು, ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿಯೂ ಪೊಲೀಸರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾತನಾಡಿ, 2025-26ನೇ ಅವಧಿಯಲ್ಲಿ ದೇಶಾದ್ಯಂತ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ 154 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದು, ಅವರಲ್ಲಿ ಕರ್ನಾಟಕದ ಐವರು ಸೇರಿದ್ದಾರೆ ಎಂದು ತಿಳಿಸಿದರು. ಹುತಾತ್ಮ ಪೊಲೀಸರ ಹೆಸರುಗಳನ್ನು ವಾಚಿಸಿ ಗೌರವ ಸಲ್ಲಿಸಿದರು.

ಪೊಲೀಸ್ ಕವಾಯತು ತಂಡದಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿತು. ಬಳಿಕ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಹುತಾತ್ಮ ಪೊಲೀಸರ ತ್ಯಾಗವನ್ನು ಸ್ಮರಿಸಲಾಯಿತು.

ರಾಷ್ಟ್ರದ ಆಂತರಿಕ ಭದ್ರತೆ, ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಹಾಗೂ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರ ಸೇವೆ ಅನನ್ಯವಾಗಿದೆ ಎಂದು ಬಿಂದುಮಣಿ ಹೇಳಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಚಂದ್ರಶೇಖರ, ಗೃಹರಕ್ಷಕ ದಳದ ಪರವಾಗಿ ಸೂರಜ್, ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಸೇರಿದಂತೆ ಹಲವು ಗಣ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪೊಲೀಸ್ ಮುಖ್ಯಪೇದೆಗಳಾದ ಫಾರುಕ್, ಲೋಕೇಶ್ ಮತ್ತು ಸುಕನ್ಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version