ಮಡಿಕೇರಿ : ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜೂ.23 ರಂದು ಪೊನ್ನಂಪೇಟೆಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನಾಚಪ್ಪ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಪೊನ್ನಂಪೇಟೆಯಲ್ಲಿ ಮಾನವ ಸರಪಳಿ ನಿರ್ಮಿಸಿ ವಿವಿಧ ಬೇಡಿಕೆಗಳ ಕುರಿತು ಹಕ್ಕೊತ್ತಾಯ ಮಂಡಿಸಲಾಗುವುದು.
ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ವಿವರಿಸಲಾಗುವುದು ಎಂದರು.
ಈ ಮಾನವ ಸರಪಳಿ ಕಾರ್ಯಕ್ರಮವು ಕೊಡವ ಸಮುದಾಯದ ಹಕ್ಕೊತ್ತಾಯಗಳಿಗೆ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಶಾಂತಿಯುತವಾಗಿ ನಡೆಯಲಿದ್ದು, ಪೊನ್ನಂಪೇಟೆ ಭಾಗದ ಕೊಡವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.



