ವಿರಾಜಪೇಟೆ: ಹೆಗ್ಗಳದಲ್ಲಿರುವ ಸ್ನೇಹ ಭವನ ವೃದ್ಧಾಶ್ರಮದ ನಿವಾಸಿಗಳ ಮನವಿಗೆ ಸ್ಪಂದಿಸಿದ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಟಿವಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಹಿಂದೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದ ಶಾಸಕರು, ನಿವಾಸಿಗಳೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ಮನರಂಜನೆಗಾಗಿ ಟಿವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಆಶ್ರಮದ ನಿವಾಸಿಗಳು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ್ದ ಶಾಸಕರು ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು.
ಅದರಂತೆ, ನೀಡಿದ್ದ ಭರವಸೆಯಂತೆ ತಮ್ಮ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ಅವರ ಮೂಲಕ ಇಂದು ಟಿವಿಯನ್ನು ಆಶ್ರಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೆ, ಒಂದು ವಾರದೊಳಗೆ ಟೇಬಲ್ ವ್ಯವಸ್ಥೆಯನ್ನೂ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರ ಪರವಾಗಿ ಆಶ್ರಮದ ನಿವಾಸಿಗಳಿಗೆ ಕೇಕ್ ಹಾಗೂ ಹಣ್ಣು-ಹಂಪಲು ವಿತರಿಸಿ ಸಂಭ್ರಮ ಹಂಚಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಆಶ್ರಮಕ್ಕೆ ಅಗತ್ಯವಿರುವ ಇತರ ಸೌಲಭ್ಯಗಳನ್ನು ಒದಗಿಸುವುದಾಗಿಯೂ ಶಾಸಕರು ಭರವಸೆ ನೀಡಿದ್ದಾರೆ.
ಶಾಸಕರು ನೀಡಿದ ಭರವಸೆಯನ್ನು ಈಡೇರಿಸಿರುವುದಕ್ಕೆ ಆಶ್ರಮದ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಕಾಂಚನ್ ಪೊನ್ನಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಅಲೆಕ್ಸ್ ಬ್ರಿಟೊ, ಕುಂಡಚ್ಚಿರ ಮಂಜು ದೇವಯ್ಯ, ಕಿಶೋರ್ ಹಾಗೂ ಲತೀಫ್ ಉಪಸ್ಥಿತರಿದ್ದರು.

