ಮಕ್ಕಳ ಜೀವಕ್ಕೆ ಅಪಾಯವಾದರೂ ಸರ್ಕಾರಕ್ಕೆ ಕಾಳಜಿ ಇಲ್ಲವೇ?
ಚೆಯ್ಯಂಡಾಣೆ: ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕಾದ ಶಾಲೆಯೇ ಅಪಾಯದ ಅಂಚಿನಲ್ಲಿದೆ! ಚೆಯ್ಯಂಡಾಣೆ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಭೀತಿಯಿದೆ ಎಂದು ಬಿಜೆಪಿ ಕೊಡಗು ಸಾಮಾಜಿಕ ಜಾಲತಾಣದಲ್ಲಿ ಆತಂಕ ವ್ಯಕ್ತಪಡಿಸಿದೆ.
ಶಾಲೆಯ ಕಟ್ಟಡದ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದ್ದರೂ, ದುರಸ್ತಿಗೆ ಸರ್ಕಾರದ ಬಳಿ ಹಣವಿಲ್ಲವೇ ಎಂಬ ಪ್ರಶ್ನೆಯನ್ನು ಬಿಜೆಪಿ ಎತ್ತಿದೆ. ಮಕ್ಕಳ ಸುರಕ್ಷತೆಯೇ ಮುಖ್ಯವಾಗಬೇಕಾದ ಸಂದರ್ಭದಲ್ಲಿ, ಶಾಲೆಯ ದುಸ್ಥಿತಿ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಹಾಗೂ ಜನಪ್ರತಿನಿಧಿಗಳ ಕಾಳಜಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಕ್ಕಳು ಕಲಿಯಬೇಕಾದ ಶಾಲೆ ಸುರಕ್ಷಿತವಾಗಿರಬೇಡವೇ? ಕಟ್ಟಡದ ದುಸ್ಥಿತಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಜನಪ್ರತಿನಿಧಿಗಳು ಈ ಶಾಲೆಯತ್ತ ಕಣ್ಣೆತ್ತಿಯೂ ನೋಡಿಲ್ಲವೇ? ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆಯೇ? ಎಂಬ ಪ್ರಶ್ನೆಗಳನ್ನು ಬಿಜೆಪಿ ಮುಂದಿಟ್ಟಿದೆ.
ಮಕ್ಕಳ ಭವಿಷ್ಯದ ಬಗ್ಗೆ ಮಾತನಾಡುವ ಸರ್ಕಾರ, ಅವರ ಸುರಕ್ಷಿತ ಶಿಕ್ಷಣಕ್ಕೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂಬ ಆಕ್ರೋಶ ವ್ಯಕ್ತವಾಗಿದೆ.
ಶಾಲೆ ಕುಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ, ಅನಾಹುತ ಸಂಭವಿಸುವ ಮೊದಲೇ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಚೆಯ್ಯಂಡಾಣೆ ಶಾಲೆಯ ದುಸ್ಥಿತಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ, ಕಟ್ಟಡದ ಸುರಕ್ಷತಾ ಪರಿಶೀಲನೆ ನಡೆಸಿ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

