
ಗುಡ್ಡೆಹೊಸೂರು ಬೊಳ್ಳೂರಿನಲ್ಲಿ ಭಾರಿ ಟಿಪ್ಪರ್ಗಳ ಅಬ್ಬರಕ್ಕೆ ನೀರಾವರಿ ನಿಗಮದ ರಸ್ತೆ ಹಾನಿ.
ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಿಲ್ಲ; ಗ್ರಾಮಸ್ಥರ ಆಕ್ರೋಶ
ಕುಶಾಲನಗರ: ಖಾಸಗಿ ಲೇಔಟ್ ನಿರ್ಮಾಣದ ಭರಾಟೆಯಲ್ಲಿ ಸರ್ಕಾರಿ ರಸ್ತೆ ಹಾಳಾದ ಆರೋಪ, ಭಾರಿ ಗಾತ್ರದ ಟಿಪ್ಪರ್ ಲಾರಿಗಳಲ್ಲಿ ಜಲ್ಲಿ ಕಲ್ಲು ಹಾಗೂ ಎಂ-ಸ್ಯಾಂಡ್ ಸಾಗಾಟ ಮಾಡಿರುವ ಪರಿಣಾಮ ಬೊಳ್ಳೂರು ಗ್ರಾಮದ ನೀರಾವರಿ ನಿಗಮದ ರಸ್ತೆ ಹದಗೆಟ್ಟಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರು ಗ್ರಾಮದಿಂದ ಮಾದಾಪಟ್ಟಣದ ಪಾಲಿಟೆಕ್ನಿಕ್ ಮೂಲಕ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ, ಖಾಸಗಿ ಲೇಔಟ್ ಕಾಮಗಾರಿಗೆ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳ ಸಂಚಾರದಿಂದ ಹಾನಿಗೊಳಗಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಒಂದೇ ದಿನದಲ್ಲಿ ಭಾರಿ ಪ್ರಮಾಣದ ನಿರ್ಮಾಣ ಸಾಮಗ್ರಿ ಸಾಗಾಟ ಮಾಡಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂಬುದು ಗ್ರಾಮಸ್ಥರ ದೂರಾಗಿದೆ.
ಇದು ಮೊದಲೇನಲ್ಲ! ಭಾರಿ ವಾಹನಗಳ ಸಂಚಾರದಿಂದ ರಸ್ತೆ ಹಾನಿಯಾಗುತ್ತಿರುವ ಬಗ್ಗೆ ಈ ಹಿಂದೆಯೇ ನೀರಾವರಿ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಮತ್ತೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಖಾಸಗಿ ಲೇಔಟ್ ಕಾಮಗಾರಿಗೆ ಹಾಳಾಗಬೇಕೇ? ರಸ್ತೆ ಹಾನಿಗೆ ಕಾರಣರಾದವರ ಜವಾಬ್ದಾರಿ ಏನು? ಹಾನಿಗೊಳಗಾದ ರಸ್ತೆಯ ದುರಸ್ತಿ ವೆಚ್ಚವನ್ನು ಸಾರ್ವಜನಿಕರ ಹಣದಿಂದಲೇ ಭರಿಸಬೇಕೇ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.
ಖಾಸಗಿ ಕಾಮಗಾರಿಯಿಂದ ರಸ್ತೆ ಹಾಳಾಗಿದ್ದರೆ, ಸಂಬಂಧಪಟ್ಟವರಿಂದಲೇ ದುರಸ್ತಿ ಮಾಡಿಸಬೇಕು. ನೀರಾವರಿ ನಿಗಮದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಲೇಔಟ್ ಅಭಿವೃದ್ಧಿಯಾಗಲಿ; ಆದರೆ ಸಾರ್ವಜನಿಕರ ರಸ್ತೆ ಹಾಳಾಗಲು ಬಿಡಬಾರದು ಎಂಬುದು ಗ್ರಾಮಸ್ಥರ ಸ್ಪಷ್ಟ ನಿಲುವು.

