ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ನಲ್ಲಿ ಕೊಡಗಿನ ದಿಯಾ ಭೀಮಯ್ಯಗೆ ಬೆಳ್ಳಿ ಪದಕ
ಪುಣೆ: ಕೊಡಗಿನ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರ್ತಿ ದಿಯಾ ಭೀಮಯ್ಯ ಅವರು ಯೋನೆಕ್ಸ್ ಸನ್ರೈಸ್ ಇಂಡಿಯಾ ಜೂನಿಯರ್ ಇಂಟರ್ನ್ಯಾಷನಲ್ ಗ್ರ್ಯಾಂಡ್ ಪ್ರಿಕ್ಸ್–2026 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಪುಣೆಯ ಪಿಡಿಎಂಬಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಆಗಸ್ಟ್ 25ರಿಂದ 30ರವರೆಗೆ ನಡೆದ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕಿತೆಯಾಗಿದ್ದ ದಿಯಾ ಭೀಮಯ್ಯ, ತೆಲಂಗಾಣದ ಕೀರ್ತಿ ಮಂಚಾಲ ಅವರೊಂದಿಗೆ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕಕ್ಕೆ ಭಾಜನರಾದರು.
ಫೈನಲ್ ಪಂದ್ಯದಲ್ಲಿ ದಿಯಾ-ಕೀರ್ತಿ ಜೋಡಿ ಥೈಲ್ಯಾಂಡ್ನ ಚಾಂತ್ರಾತ್ ಮರ್ಡಾಂಕುಲ್ ಮತ್ತು ಪೀರ್ಪ್ಲಾಯಿ ಸುಟ್ಟಿವಾರಯನೊನ್ ಜೋಡಿ ವಿರುದ್ಧ 15-21, 11-21 ಅಂಕಗಳಿಂದ ಸೋಲು ಕಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್, ಅಮೆರಿಕ ಮತ್ತು ಯುಎಇ ದೇಶಗಳ ಆಟಗಾರರು ಭಾಗವಹಿಸಿದ್ದರು.
19 ವರ್ಷದೊಳಗಿನ ಜೂನಿಯರ್ ವಿಭಾಗದಲ್ಲಿ ದಿಯಾ ಭೀಮಯ್ಯ ಗಳಿಸಿರುವ ನಾಲ್ಕನೇ ಅಂತಾರಾಷ್ಟ್ರೀಯ ಪದಕ ಇದಾಗಿದೆ. ಈ ಹಿಂದೆ 2024ರಲ್ಲಿ ನೇಪಾಳದಲ್ಲಿ ನಡೆದ ನೇಪಾಳ ಇಂಟರ್ನ್ಯಾಷನಲ್ ಸೀರೀಸ್ನಲ್ಲಿ ಬಾಲಕಿಯರ ಡಬಲ್ಸ್ನಲ್ಲಿ ಬೆಳ್ಳಿ ಹಾಗೂ ಸಿಂಗಲ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೇ ತಿಂಗಳಲ್ಲಿ ನಡೆದ ಕೊಟಕ್ ಇಂಡಿಯಾ ಜೂನಿಯರ್ ಇಂಟರ್ನ್ಯಾಷನಲ್ ಸೀರೀಸ್–2026ರಲ್ಲಿ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕಕ್ಕೂ ಪಾತ್ರರಾಗಿದ್ದರು.

