ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
ಸೆ.25ರ ಮಧ್ಯಾಹ್ನ 2ರಿಂದ ಸೆ.26ರ ಬೆಳಗ್ಗೆ 10ರವರೆಗೆ ಸಂಚಾರ ನಿರ್ಬಂಧ
ವಿರಾಜಪೇಟೆ ನಗರದಲ್ಲಿ ಗೌರಿ-ಗಣೇಶ ಉತ್ಸವದ ಅಂಗವಾಗಿ ಸೆ.25ರಂದು ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ಸೆ.26ರಂದು ಬೆಳಗ್ಗೆ ಗೌರಿಕೆರೆಯಲ್ಲಿ ಸಾಮೂಹಿಕ ವಿಸರ್ಜನೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ.
ಉತ್ಸವದಲ್ಲಿ ಸುಮಾರು 20ರಿಂದ 25 ಸಾವಿರ ಮಂದಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಮಂಟಪಗಳ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಆದೇಶದಂತೆ ಸೆ.25ರ ಮಧ್ಯಾಹ್ನ 2ರಿಂದ ಸೆ.26ರ ಬೆಳಗ್ಗೆ 10ರವರೆಗೆ ಹಲವು ರಸ್ತೆಗಳಲ್ಲಿನ ವಾಹನ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.
ವಿರಾಜಪೇಟೆ ನಗರದ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಬ್ಬನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ.
ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜು, ಮಗ್ಗುಲ ಜಂಕ್ಷನ್ನಿಂದ ದಬ್ಬನಿ ಮೊಹಲ್ಲಾ ಜಂಕ್ಷನ್ ಹಾಗೂ ಖಾಸಗಿ ಬಸ್ ನಿಲ್ದಾಣದಿಂದ ಮಟನ್ ಮಾರ್ಕೆಟ್ವರೆಗೂ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.
ಹೊರಗಿನ ವಾಹನಗಳಿಗೆ ಪರ್ಯಾಯ ಮಾರ್ಗ
ಕೇರಳದ ಮಾಕುಟ್ಟ ಮಾರ್ಗದಿಂದ ಗೋಣಿಕೊಪ್ಪ ಅಥವಾ ಸಿದ್ದಾಪುರದ ಕಡೆ ತೆರಳುವ ವಾಹನಗಳು ಪೆರುಂಬಾಡಿ–ಬಾಳುಗೋಡು–ಬಿಟ್ಟಂಗಾಲ–ಕೈಕೇರಿ–ಪಾಲಿಬೆಟ್ಟ ಮಾರ್ಗವಾಗಿ ಸಂಚರಿಸಬೇಕು.
ಸಿದ್ದಾಪುರದಿಂದ ಕೇರಳದ ಕಡೆ ತೆರಳುವ ವಾಹನಗಳು ಸಿದ್ದಾಪುರ–ಬಿಟ್ಟಂಗಾಲ–ಬಾಳುಗೋಡು–ಪೆರುಂಬಾಡಿ ಮಾರ್ಗ ಬಳಸಬೇಕು.
ಮಡಿಕೇರಿಯಿಂದ ಕೇರಳದ ಕಡೆ ತೆರಳುವ ವಾಹನಗಳು ಮೂರ್ನಾಡು–ಕೊಂಡಂಗೇರಿ–ಅಮ್ಮತ್ತಿ–ಪಾಲಿಬೆಟ್ಟ–ಕೈಕೇರಿ–ಬಿಟ್ಟಂಗಾಲ–ಬಾಳುಗೋಡು–ಪೆರುಂಬಾಡಿ–ಮಾಕುಟ್ಟ ಮಾರ್ಗದಲ್ಲಿ ಸಂಚರಿಸಬೇಕು.
ಮಡಿಕೇರಿಯಿಂದ ಗೋಣಿಕೊಪ್ಪ ಮೂಲಕ ಮೈಸೂರು–ಬೆಂಗಳೂರು ಕಡೆ ತೆರಳುವ ವಾಹನಗಳು ಮೂರ್ನಾಡು–ಕೊಂಡಂಗೇರಿ–ಅಮ್ಮತ್ತಿ–ಪಾಲಿಬೆಟ್ಟ–ಕೈಕೇರಿ–ಗೋಣಿಕೊಪ್ಪ ಮಾರ್ಗ ಬಳಸಬೇಕು.
ಮೈಸೂರು–ಬೆಂಗಳೂರು ಕಡೆಯಿಂದ ಮಡಿಕೇರಿಗೆ ತೆರಳುವ ವಾಹನಗಳು ಗೋಣಿಕೊಪ್ಪ–ಪಾಲಿಬೆಟ್ಟ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.
ಮೆರವಣಿಗೆ ವೀಕ್ಷಿಸಲು ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ
ವಿವಿಧ ದಿಕ್ಕುಗಳಿಂದ ಮೆರವಣಿಗೆ ವೀಕ್ಷಿಸಲು ಆಗಮಿಸುವ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಪೆರುಂಬಾಡಿ ಕಡೆಯಿಂದ ಬರುವ ವಾಹನಗಳನ್ನು ಕೀರ್ತಿ ರೆಸ್ಟೋರೆಂಟ್ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಬೇಕು.
ಸಿದ್ದಾಪುರ ಕಡೆಯಿಂದ ಬರುವ ವಾಹನಗಳಿಗೆ ಮಗ್ಗುಲ ಜಂಕ್ಷನ್ ಹಾಗೂ ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಗೋಣಿಕೊಪ್ಪ ಕಡೆಯಿಂದ ಬರುವ ವಾಹನಗಳನ್ನು ಕಾವೇರಿ ಕಾಲೇಜು ಬಳಿಯಿಂದ ಬಿಟ್ಟಂಗಾಲ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ, ಬೇಟೋಳಿ–ಗುಂಡಿಗೆರೆ–ಚಿಟ್ಟಡೆ ಕಡೆಯಿಂದ ಬರುವ ವಾಹನಗಳನ್ನು ಮಹಿಳಾ ಸಮಾಜ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಲು ಸೂಚಿಸಲಾಗಿದೆ.
ಒಂಟಿಯಂಗಡಿ–ಚೆಂಬೆಬೆಳ್ಳೂರು ಕಡೆಯಿಂದ ಬರುವ ವಾಹನಗಳಿಗೆ ಕೊಡವ ಸಮಾಜ ಜಂಕ್ಷನ್ನಿಂದ ಚೆಂಬೆಬೆಳ್ಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಹಾಗೂ ಮಡಿಕೇರಿ ಕಡೆಯಿಂದ ಬರುವ ವಾಹನಗಳಿಗೆ ಚಿಕ್ಕಪೇಟೆಯಿಂದ ಮೂರ್ನಾಡು ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಪೊಲೀಸ್ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸುವಂತೆ ಹಾಗೂ ಉತ್ಸವದ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಗೆ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಅಗತ್ಯಕ್ಕೆ ಅನುಗುಣವಾಗಿ ಸಂಚಾರ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ.
ಸುದ್ದಿ ಕದ್ದು ಪತ್ರಕರ್ತರಾಗಬೇಡಿ

