ಮಡಿಕೇರಿ ಸೆ.05: ಮಡಿಕೇರಿ ನಗರದಲ್ಲಿ ಅಡಕೆ ಹಾಳೆ ಸೇರಿದಂತೆ ಯಾವುದೇ ಪರಿಸರ ಸ್ನೇಹಿ ವಸ್ತುಗಳನ್ನು ಸದ್ಯಕ್ಕೆ ನಿಷೇಧಿಸಲಾಗಿಲ್ಲ ಎಂದು ಮಡಿಕೇರಿ ನಗರಸಭೆ ಪೌರಾಯುಕ್ತ ರಮೇಶ್ ಸ್ಪಷ್ಟಪಡಿಸಿದ್ದಾರೆ.
ನಗರಸಭೆಯ ಅಧಿಕಾರಿಯೊಬ್ಬರು ನೀಡಿದ ತಪ್ಪು ಮಾಹಿತಿಯಿಂದ ಸಾರ್ವಜನಿಕರು ಹಾಗೂ ವರ್ತಕರಲ್ಲಿ ಅಡಕೆ ಹಾಳೆ ಬಳಕೆ ನಿಷೇಧಿಸಲಾಗುತ್ತಿದೆ ಎಂಬ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಪೌರಾಯುಕ್ತರು, ನಗರಸಭೆಯು ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಅಂಶ ಹೊಂದಿರುವ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಾತ್ರ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಅಡಕೆ ಹಾಳೆ ಸೇರಿದಂತೆ ಇತರ ವಸ್ತುಗಳ ಮೇಲೆ ಯಾವುದೇ ನಿಷೇಧ ಜಾರಿಗೊಳಿಸಲಾಗಿಲ್ಲ. ಆದ್ದರಿಂದ ವರ್ತಕರು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳಬೇಕಾದ ಸಂದರ್ಭ ಬಂದರೆ ವರ್ತಕರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ವಿಶ್ವಾಸ ಪಡೆದು, ಅವರೊಂದಿಗೆ ಚರ್ಚಿಸಿದ ಬಳಿಕವೇ ನಗರಸಭೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.

