ಗೋಣಿಕೊಪ್ಪ: ಜನರ ಓಡಾಟವಿರುವ ಗೋಣಿಕೊಪ್ಪ ಮಾರ್ಕೆಟ್‌ನಲ್ಲೇ ಅಪ್ರಾಪ್ತ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಆರೋಪ ಕೇಳಿಬಂದಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಆಕ್ರೋಶ ಮೂಡಿಸಿದೆ.
ಪ್ರಕರಣ ನಡೆದ 24 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ ಪೊಲೀಸರು
ಮಾರ್ಕೆಟ್‌ನ ಪೊಲೀಸ್ ಸಾರ್ವಜನಿಕ ಶೌಚಾಲಯದ ಸಮೀಪ ಬಾಲಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಆ.28ರಂದು ದೂರು ಸ್ವೀಕರಿಸಿದ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಕರಣದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ಕಾಕೇರ ಡಿ. ಭರತ್ (57), ಕುಂಜಿಲ ಗ್ರಾಮದ ನಿವಾಸಿ ಎಂದು ಗುರುತಿಸಿ, ಆ.30ರಂದು ವಿರಾಜಪೇಟೆಯಲ್ಲಿ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ. 111/2026ರಂತೆ ಬಿಎನ್‌ಎಸ್ ಕಲಂ 64(2)(ಐ), 65(1) ಹಾಗೂ ಪೋಕ್ಸೋ ಕಾಯ್ದೆಯ ಕಲಂ 4(1), 6(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಕ್ಕಳ ಸುರಕ್ಷತೆಯೇ ಸಮಾಜದ ಮೊದಲ ಆದ್ಯತೆಯಾಗಬೇಕಾದ ಸಂದರ್ಭದಲ್ಲಿ, ಸಾರ್ವಜನಿಕ ಸ್ಥಳದಲ್ಲೇ ಇಂತಹ ಘಟನೆ ನಡೆದಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದ್ದು, ಬಾಲಕಿಯ ಗೌರವ ಮತ್ತು ಗೌಪ್ಯತೆ ಕಾಪಾಡುವುದು ಅತ್ಯಂತ ಅಗತ್ಯವಾಗಿದೆ.
ಬಾಲಕಿಯ ನೋವಿಗೆ ನ್ಯಾಯ ಸಿಗಲಿ… ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


