
ಮಡಿಕೇರಿ–ವಿರಾಜಪೇಟೆ ರಾಜ್ಯ ಹೆದ್ದಾರಿಯ ಮೇಕೇರಿ ಬಳಿ ಕಳೆದ ವರ್ಷ ಕುಸಿದ ರಸ್ತೆ; ತಿರುವಿನಲ್ಲೇ ಅಪಾಯದ ಸ್ಥಿತಿ, ಜಿಲ್ಲಾಡಳಿತದ ವಿರುದ್ಧ ನಿರ್ಲಕ್ಷ್ಯದ ಆರೋಪ
ಮಡಿಕೇರಿ: ಮಡಿಕೇರಿ–ವಿರಾಜಪೇಟೆ ರಾಜ್ಯ ಹೆದ್ದಾರಿಯ ಮೇಕೇರಿ ಬಳಿ ಕಳೆದ ವರ್ಷ ಕುಸಿದಿರುವ ರಸ್ತೆಗೆ ವರ್ಷ ಕಳೆದರೂ ತಡೆಗೋಡೆ ನಿರ್ಮಾಣವಾಗದೆ ವಾಹನ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ.
ಕಳೆದ ವರ್ಷ ರಸ್ತೆ ಕುಸಿದ ಬಳಿಕ ತಡೆಗೋಡೆ ನಿರ್ಮಿಸಿ ರಸ್ತೆ ಸುರಕ್ಷಿತಗೊಳಿಸುವ ಅಗತ್ಯವಿದ್ದರೂ, ಇದುವರೆಗೆ ಯಾವುದೇ ಶಾಶ್ವತ ಕಾಮಗಾರಿ ಕೈಗೊಂಡಿರುವುದು ಕಂಡುಬಂದಿಲ್ಲ. ಅದರಲ್ಲೂ ರಸ್ತೆಯು ತಿರುವಿನಲ್ಲೇ ಕುಸಿದಿರುವುದರಿಂದ ವಾಹನ ಸವಾರರಿಗೆ ಹೆಚ್ಚಿನ ಅಪಾಯ ಎದುರಾಗಿದೆ.
ತಿರುವಿನಲ್ಲಿ ಎರಡೂ ಬದಿಯಿಂದ ಏಕಕಾಲದಲ್ಲಿ ವಾಹನಗಳು ಬಂದಾಗ ಪರಸ್ಪರ ದಾರಿ ನೀಡಲು ಸಾಕಷ್ಟು ಸ್ಥಳಾವಕಾಶ ಇಲ್ಲದಂತಾಗಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹದಗೆಡುವ ಆತಂಕವೂ ಸ್ಥಳೀಯರಲ್ಲಿ ಮೂಡಿದೆ.
ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ಇಂತಹ ಅಪಾಯಕಾರಿ ಸ್ಥಿತಿ ಮುಂದುವರಿದಿದ್ದರೂ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಸಂಭವಿಸುವ ಮುನ್ನ ತಕ್ಷಣ ತಡೆಗೋಡೆ ನಿರ್ಮಿಸಿ ರಸ್ತೆ ಸುರಕ್ಷಿತಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



