ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ
ಕೊಡಗಿಗೆ ಏನೂ ನೀಡದೆ ಮೋಡ ಬಿತ್ತನೆ ಏಕೆ?
ವಿರಾಜಪೇಟೆ: ಕಾವೇರಿ ನದಿಯ ಉಗಮಸ್ಥಾನವಾದ ಕೊಡಗಿನಿಂದ ಅಪಾರ ಪ್ರಮಾಣದ ನೀರು ರಾಜ್ಯದ ವಿವಿಧ ಭಾಗಗಳಿಗೆ ಹರಿದುಹೋಗುತ್ತಿದ್ದರೂ, ಕೊಡಗಿನ ರೈತರಿಗೆ ಸಮರ್ಪಕ ಪರಿಹಾರ ಹಾಗೂ ಮೂಲಸೌಕರ್ಯ ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ನಡೆಸುವ ಚಿಂತನೆ ಎಷ್ಟು ಸಮಂಜಸ ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ಪ್ರಶ್ನಿಸಿದ್ದಾರೆ.
ಕಾಫಿ ಸೇರಿದಂತೆ ಕೃಷಿ ಬೆಳೆಗಳಿಗೆ ಹವಾಮಾನ ವೈಪರೀತ್ಯದಿಂದ ನಷ್ಟವಾಗುತ್ತಿದ್ದು, ಕಾಡಾನೆ, ಹುಲಿ ಸೇರಿದಂತೆ ವನ್ಯಜೀವಿ ಹಾವಳಿಯೂ ಹೆಚ್ಚಾಗಿದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ಮುಂದುವರಿದಿವೆ ಎಂದು ಅವರು ತಿಳಿಸಿದ್ದಾರೆ.
“ಕೊಡಗಿನಿಂದ ಕಾವೇರಿ ನೀರು ಬೇಕು, ಆದರೆ ಕೊಡಗಿನ ರೈತರ ಸಮಸ್ಯೆಗಳು ಏಕೆ ಕಾಣುವುದಿಲ್ಲ? ಮೋಡ ಬಿತ್ತನೆಗೆ ಖರ್ಚು ಮಾಡುವ ಹಣವನ್ನು ಮೊದಲು ರೈತರ ಪರಿಹಾರ, ಜಲಮೂಲಗಳ ಸಂರಕ್ಷಣೆ, ರಸ್ತೆ ಅಭಿವೃದ್ಧಿ ಹಾಗೂ ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಬಳಸಬೇಕು,” ಎಂದು ರಂಜಿ ಪೂಣಚ್ಚ ಆಗ್ರಹಿಸಿದ್ದಾರೆ.
ಕೊಡಗನ್ನು ಕೇವಲ ಕಾವೇರಿ ನೀರಿನ ಮೂಲವಾಗಿ ನೋಡದೆ, ಜಿಲ್ಲೆಯ ರೈತರು ಮತ್ತು ಪರಿಸರದ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.



