ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
ಗೋಣಿಕೊಪ್ಪ: ಕಾವೇರಿ ಕಾಲೇಜು ಸಮೀಪದ ‘ಕೂರ್ಗ್ ಎಕ್ಸ್‌ಪ್ರೆಸ್ ಕಾಫಿ ಶಾಪ್’ನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಆರೋಪಿಯನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 5ರಂದು ರಾತ್ರಿ ಕಾಫಿ ಶಾಪ್‌ನಿಂದ ಸುಮಾರು ₹4 ಸಾವಿರ ನಗದು ಕಳವಾಗಿತ್ತು. ಈ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ವಿಶೇಷ ತನಿಖಾ ತಂಡವು ತಲೆಮರೆಸಿಕೊಂಡಿದ್ದ ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಸಲಿಂ.ಟಿ.ಎ (44) ಎಂಬಾತನನ್ನು ಆಗಸ್ಟ್ 23ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಇತರ ಕಳವು ಪ್ರಕರಣಗಳಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಗೋಣಿಕೊಪ್ಪ ಪೊಲೀಸ್ ಠಾಣೆಯ ಮತ್ತೊಂದು ಪ್ರಕರಣದಲ್ಲಿ ಸುಮಾರು ₹37 ಸಾವಿರ, ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ₹8 ಸಾವಿರ ಹಾಗೂ ಕೇರಳದ ಇರಿಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರಕರಣಗಳಲ್ಲಿ ಒಟ್ಟು ₹51,650 ನಗದು ಕಳವು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಸಾರ್ವಜನಿಕರು ತಮ್ಮ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.



