ಆ.27ರಂದು ಮಡಿಕೇರಿಯಲ್ಲಿ ಸಭೆ; ಹಾಲಿ–ಮಾಜಿ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳ ಪ್ರಮುಖರು ಹಾಗೂ ಚಿಂತಕರಿಗೆ ಸಂಸದ ಯದುವೀರ್ ಆಹ್ವಾನ

ಮಡಿಕೇರಿ: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ. ಕಸ್ತೂರಿ ರಂಗನ್ ವರದಿಯ ಶಿಫಾರಸುಗಳ ಜಾರಿ ಕೊಡಗು ಜಿಲ್ಲೆಯ ಭೌಗೋಳಿಕತೆ, ಕೃಷಿ, ಪರಿಸರ ಹಾಗೂ ಜನಜೀವನದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಸಮಗ್ರ ಚರ್ಚೆ ನಡೆಸಲು ಮಹತ್ವದ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 27ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿ ನಗರದ ರಾಜದರ್ಶನ್ ಹೋಟೆಲ್ ಸಭಾಂಗಣದಲ್ಲಿ ಸಭೆ ನಡೆಯಲಿದೆ.

ಕೊಡಗು ಜಿಲ್ಲೆಯ ಹಾಲಿ ಹಾಗೂ ಮಾಜಿ ಸಂಸದರು, ಶಾಸಕರು, ಚುನಾಯಿತ ಹಾಲಿ–ಮಾಜಿ ಜನಪ್ರತಿನಿಧಿಗಳು, ವಿವಿಧ ಸಂಘ–ಸಂಸ್ಥೆಗಳ ಮುಖ್ಯಸ್ಥರು, ಪ್ರಗತಿಪರ ಚಿಂತಕರು ಹಾಗೂ ನಾಗರಿಕರನ್ನು ಸಭೆಗೆ ಆಹ್ವಾನಿಸಲಾಗಿದೆ.

ಕಸ್ತೂರಿ ರಂಗನ್ ವರದಿ ಜಾರಿಯಿಂದ ರೈತರು, ಬೆಳೆಗಾರರು ಹಾಗೂ ಗ್ರಾಮೀಣ ಜನರ ಬದುಕಿನ ಮೇಲೆ ಉಂಟಾಗಬಹುದಾದ ಸಾಧಕ–ಬಾಧಕಗಳು, ಜಿಲ್ಲೆಯ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ನಡುವಿನ ಸಮತೋಲನ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಜಿಲ್ಲೆಯ ಹಿತರಕ್ಷಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ಎಲ್ಲರ ಸಲಹೆ–ಸೂಚನೆಗಳನ್ನು ಕ್ರೋಢೀಕರಿಸಿ, ಒಮ್ಮತದ ನಿರ್ಧಾರಕ್ಕೆ ಬರುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

ಕೊಡಗಿನ ಅಭಿವೃದ್ಧಿ ಹಾಗೂ ಜನರ ಹಿತದೃಷ್ಟಿಯಿಂದ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನ ನೀಡುವಂತೆ ಸಂಸದರು ಮನವಿ ಮಾಡಿದ್ದಾರೆ.

Exit mobile version