ಕೊಡಗಿನಲ್ಲಿ ಕಾಡಾನೆ ಕಾರ್ಯಾಚರಣೆ: ಎರಡು ದಿನ ತೋಟದ ಕೆಲಸ ಸ್ಥಗಿತಕ್ಕೆ ಸೂಚನೆ
ವಿರಾಜಪೇಟೆ: ವಿರಾಜಪೇಟೆ ಅರಣ್ಯ ವಿಭಾಗದ ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದೆ.
ಆಗಸ್ಟ್ 3 ಮತ್ತು 4ರಂದು ಕಂಗಾಲ, ಹಾಲುಗುಂದ, ಬೈರಂಭಾಡ, ಹೆಚ್ಚಿನಾಡು, ಯೆಡೂರು, ಕಾವಡಿ, ಬಿಳುಗುಂದ, ಪುಲಿಯೇರಿ, ಇಂಜಲಗೇರಿ, ಗುಹ್ಯ, ಸಿದ್ದಾಪುರ ಹಾಗೂ ಕರಡಿಗೋಡು ಗ್ರಾಮಗಳಲ್ಲಿ ಕಾಡಾನೆ ಕಾರ್ಯಾಚರಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ತೋಟದ ಮಾಲೀಕರು ಹಾಗೂ ಕಾರ್ಮಿಕರು ಎರಡು ದಿನಗಳ ಕಾಲ ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ಅಲ್ಲದೆ, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದ್ದು, ಕಾಡಾನೆ ಕಾರ್ಯಾಚರಣೆ ನಡೆಯುವ ಸಂದರ್ಭದಲ್ಲಿ ಪಟಾಕಿ ಸಿಡಿಸದಂತೆ ಎಚ್ಚರಿಕೆ ನೀಡಲಾಗಿದೆ.
ಕಾರ್ಯಾಚರಣೆಯ ವೇಳೆ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ವಿರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಡಾನೆಗಳ ಚಲನವಲನ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಕಾಡಾನೆ ಕಾರ್ಯಾಚರಣೆ ನಡೆಯುವ ಪ್ರದೇಶಗಳಿಗೆ ತೆರಳದಂತೆ ಇಲಾಖೆ ಮನವಿ ಮಾಡಿದೆ.

