ಅರಣ್ಯ ಇಲಾಖೆ ಮರ ಕಡಿಯುವ ವೇಳೆ ವಿದ್ಯುತ್ ಕಂಬಕ್ಕೆ ಹಾನಿ: ಬೀಳುವ ಸ್ಥಿತಿಯಲ್ಲಿರುವ ಕಂಬ, ಆತಂಕದಲ್ಲಿ ಗ್ರಾಮಸ್ಥರು.
ಮಡಿಕೇರಿ: ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮದಲ್ಲಿ ಅರಣ್ಯ ಇಲಾಖೆ ರಸ್ತೆ ಬದಿಯ ಮರ ಕಡಿಯುವ ವೇಳೆ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಕಂಬ ಅಪಾಯಕಾರಿಯಾಗಿ ವಾಲಿದೆ.
ಮರ ಕಡಿಯುವ ಸಂದರ್ಭದಲ್ಲಿ ವಿದ್ಯುತ್ ಕಂಬಕ್ಕೆ ಹಾನಿಯಾಗಿರುವ ಪರಿಣಾಮ ಕಂಬ ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಂಬಕ್ಕೆ ಜೋಡಿಸಿರುವ ವಿದ್ಯುತ್ ತಂತಿಗಳೂ ಬಿಗಿಯಾಗಿ ಎಳೆಯಲ್ಪಟ್ಟಿರುವುದರಿಂದ ಅಪಾಯ ಮತ್ತಷ್ಟು ಹೆಚ್ಚಾಗಿದೆ.
ಈ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳು ನಿತ್ಯ ಸಂಚರಿಸುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ವಿದ್ಯುತ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ದುರಸ್ತಿ ಕಾಮಗಾರಿ ಕೈಗೊಂಡು ಅಪಾಯ ನಿವಾರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


