ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು ಶವ ಪತ್ತೆ; ಶಿವರಾಜುಗಾಗಿ ಮುಂದುವರಿದ ಶೋಧ

ಮಡಿಕೇರಿ, ಜು. 12: ಮೀನು ಹಿಡಿಯಲು ತೆರಳಿದ್ದ ವೇಳೆ ನದಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರಲ್ಲಿ ನಾಗರಾಜು ಅವರ ಮೃತದೇಹ ಭಾನುವಾರ ಮುಂಜಾನೆ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದ್ದು, ಮತ್ತೋರ್ವ ನಾಪತ್ತೆಯಾಗಿರುವ ಶಿವರಾಜುಗಾಗಿ ಎನ್‌ಡಿಆರ್‌ಎಫ್ (NDRF) ತಂಡದಿಂದ ಶೋಧ ಕಾರ್ಯ ಮುಂದುವರಿದಿದೆ.

ಶನಿವಾರ ಸಂಜೆ ನಡೆದ ಘಟನೆಯ ಬಳಿಕ ರಾತ್ರಿ ತಡವರೆಗೂ ಶೋಧ ಕಾರ್ಯ ನಡೆಸಲಾಗಿತ್ತಾದರೂ ನಾಗರಾಜು ಮತ್ತು ಶಿವರಾಜು ಪತ್ತೆಯಾಗಿರಲಿಲ್ಲ. ಭಾನುವಾರ ಮುಂಜಾನೆ ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತೆ ಶೋಧ ಕಾರ್ಯ ಆರಂಭಿಸಿದ್ದು, ಕಾರ್ಯಾಚರಣೆ ಆರಂಭಿಸಿದ ಕೇವಲ ಅರ್ಧ ಗಂಟೆಯಲ್ಲೇ ನಾಗರಾಜು ಅವರ ಮೃತದೇಹ ಪತ್ತೆಯಾಯಿತು.

ಇನ್ನೂ ಶಿವರಾಜು ಅವರ ಸುಳಿವು ಸಿಕ್ಕಿಲ್ಲ. ನದಿಯ ವಿವಿಧ ಭಾಗಗಳಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದೊಂದಿಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಶಾಸಕ ಮಂತರ್ ಗೌಡ ಭೇಟಿ ನೀಡಿ ಶೋಧ ಕಾರ್ಯವನ್ನು ವೀಕ್ಷಿಸಿದರು. ಬಳಿಕ ಮೃತ ನಾಗರಾಜು ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಸರ್ಕಾರದಿಂದ ದೊರೆಯುವ ಅಗತ್ಯ ನೆರವು ಒದಗಿಸುವ ಕುರಿತು ಭರವಸೆ ನೀಡಿದರು.

ಮೀನು ಹಿಡಿಯಲು ತೆರಳಿದ್ದ ವೇಳೆ ಸಂಭವಿಸಿದ ಈ ದುರಂತ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದ್ದು, ಶಿವರಾಜು ಸುರಕ್ಷಿತವಾಗಿ ಪತ್ತೆಯಾಗಲಿ ಎಂಬ ಆಶಯದೊಂದಿಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶೋಧ ಕಾರ್ಯದತ್ತ ಕಾತರದಿಂದ ಕಾಯುತ್ತಿದ್ದಾರೆ.

Exit mobile version