ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಮಹಿಳೆ ನಾಪತ್ತೆ- ಅರಣ್ಯ ಇಲಾಖೆ ಪೊಲೀಸರಿಂದ ಮುಂದುವರೆದ ಶೋಧ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕಕ್ಕಬ್ಬೆ ಬಳಿಯ ಯವಕಪಾಡಿ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಮಹಿಳೆ ಯೊಬ್ಬರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.
ಗ್ರಾಮದ ಹೋಂ ಸ್ಟೇಯೊಂದರಲ್ಲಿ ತಂಗಿದ್ದ ಶರಣ್ಯ (36) ಎಂಬುವವರು ನಾಪತ್ತೆಯಾಗಿರುವ ಮಹಿಳೆ ಎಂದು ತಿಳಿದುಬಂದಿದೆ.
ಆನ್‌ಲೈನ್ ಮೂಲಕ ಹೋಂಸ್ಟೇ ಬುಕ್ಕಿಂಗ್ ಮಾಡಿ ಬಂದ ಈ ಮಹಿಳೆ ಒಬ್ಬಳೇ ಇರುವುದರಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಇರುವ ಕಾರಣದಿಂದ ಇತರೆ ಪ್ರವಾಸಿಗರೊಂದಿಗೆ ಗುರುವಾರದಂದು ಜೊತೆಯಲ್ಲಿ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ಹಿಂತಿರುಗಿ ಬಾರದ ಕಾರಣ ಅರಣ್ಯ ಇಲಾಖೆ ಹಾಗೂ ಪೋಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆಯವರು ಹಾಗೂ ಪೊಲೀಸರು, ಗ್ರಾಮಸ್ಥರ ಸಹಕಾರದಿಂದ ಬೆಟ್ಟದಲ್ಲೆಲ್ಲ ಗುರುವಾರ ಮಧ್ಯರಾತ್ರಿವರೆಗೂ ಹುಡುಕಾಡಿದರೂ ಮಹಿಳೆಯ ಸುಳಿವು ದೊರೆತಿಲ್ಲ ಎನ್ನಲಾಗಿದೆ.
ಇಂದು ಹುಡುಕಾಟ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಮಹಿಳೆಯ ಮೊಬೈಲ್ ಮಲಯಾಳಂ ನೆಟ್ವರ್ಕ್‌ನಲ್ಲಿರುವುದಾಗಿ ತಿಳಿದು ಬಂದಿದ್ದು, ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ, ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮಹಿಳೆಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.


