ದಿನಾಂಕ: 11-07-2025 ರಂದು ಸುಮಾರು 5 ವರ್ಷದ ಒಂದು ಹೆಣ್ಣು ಮಗು, ಮೈ ಕೈ ಗಾಯಗೊಂಡು ಬಿಳಿಗೆರೆ ಸಮೀಪ ಒಂಟಿಯಾಗಿ ನಿಂತಿದ್ದು, ತುರ್ತು ಸಹಾಯವಾಣಿ-112 ಕ್ಕೆ ದೂರು ಸ್ವೀಕರಿಸಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ, ಮಡಿಕೇರಿಯ ಸರ್ಕಾರಿ “ಮಡಿಲು” ಕೇಂದ್ರದಕ್ಕೆ ಸೇರಿಸಿದ್ದು, ದಿನಾಂಕ: 14-07-2025 ರಂದು ಮಗುವಿನ ತಾಯಿ ಶ್ರೀಮತಿ ಪಣಿಎರವರ ಭಾಗ್ಯ ರವರನ್ನು ಪತ್ತೆಮಾಡಿ ತನ್ನ ಮಗಳನ್ನು ಭೇಟಿ ಮಾಡಿಸಿದ್ದು, ಮಗಳಿಗೆ ಮೂಗು, ಹಣೆ, ಕೆನ್ನೆಗಳಿಗೆ 2 ಕಾಲಿಗೆ, 2 ಕೈಗಳಿಗೆ ಸುಟ್ಟ ಗಾಯದ ಕಲೆಗಳಿದ್ದು ಹಾಗೂ ಮೈ ಕೈ ಮೇಲೆ ಅಲ್ಲಲ್ಲಿ ಗಾಯಗಳಿದ್ದು ಈ ಬಗ್ಗೆ ಮಗಳನ್ನು ವಿಚಾರ ಮಾಡಿದಾಗ ರವಿ ಅಪ್ಪನು ಬೆಂಕಿಯಿಂದ ಸುಟ್ಟು ಹಾಗೂ ದೊಣ್ಣೆಯಿಂದ ಹೊಡೆದು ನಿನ್ನನ್ನು ಸಾಯಿಸುತ್ತೇನೆಂದು ಹೇಳಿ ನೀರಿನ ತೋಡಿಗೆ ತಳ್ಳಿ ಹೋಗಿದ್ದು, ಅಲ್ಲಿಂದ ಎದ್ದು ರಸ್ತೆಯಲ್ಲಿ ನಿಂತ್ತಿರುವಾಗ ಪೊಲೀಸ್ ರವರು ನನ್ನನ್ನು ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ಮಾಡಿಸಿರುತ್ತಾರೆ. ಮಗುವಿನ ಮೈ, ಕೈ ಮೇಲೆ ಬೆಂಕಿಯಿಂದ ಸುಟ್ಟು ಹಾಗೂ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲು ಪ್ರಯಣತ್ನಿಸಿರುವ ಪಂಜರಿಎರವರ ರವಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀಮತಿ ಪಣಿಎರವರ ಭಾಗ್ಯ ರವರಿಂದ ದೂರು ಸ್ವೀಕರಿಸಿದ್ದು, ದಿನಾಂಕ: 18-07-2025 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 115(2) 118(1) 109 ಬಿ.ಎನ್.ಎಸ್. ಕಾಯ್ದೆ 2023 ಮತ್ತು 75 ಜೆ.ಜೆ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ರುದ್ರಗುಪ್ಪೆ ಗ್ರಾಮ ನಿವಾಸಿಯಾದ ಕಳ್ಳಿಯಪಂಡ ಸೋಮಯ್ಯ ರವರ ಲೈನುಮನೆಯಲಿ ವಾಸಿವಿರುವ ಶ್ರೀಮತಿ ಪಣಿಎರವರ ಭಾಗ್ಯ ರವರ ಎರಡನೇ ಗಂಡನಾದ ಪಂಜರಿಎರವರ ರವಿ ಮಂಚಳ್ಳಿ ಗ್ರಾಮದ ಲೈನುಮನೆಯಲ್ಲಿ ವಾಸವಿದ್ದಾಗ ಮೊದಲನೇ ಗಂಡನ ಹೆಣ್ಣು ಮಗು ಗೌರಿಯನ್ನು ಸುಮಾರು 1 ತಿಂಗಳ ಹಿಂದೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸ್ವೀಕರಿಸಿದ್ದು, ಕುಟ್ಟ ಪೊಲೀಸ್ ಠಾಣೆಯಲ್ಲಿ ಕಲಂ: 103(1) 238(ಎ) ಬಿ.ಎನ್.ಎಸ್.ಕಾಯ್ದೆ-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿ ಪತ್ತೆಗಾಗಿ ಶ್ರೀ ಮಹೇಶ್ ಕುಮಾರ್, ಡಿಎಪಿ, ವಿರಾಜಪೇಟೆ ಉಪವಿಭಾಗ ಮತ್ತು ಶ್ರೀ ಪಿ.ಎ.ಸೂರಜ್, ಮಡಿಕೇರಿ ಉಪವಿಭಾಗ, ಶ್ರೀ ಶಿವರುದ್ರ.ಬಿ.ಎಸ್, ಸಿಪಿಐ, ಕುಟ್ಟ ವೃತ್ತ, ಮಡಿಕೇರಿ ಮತ್ತು ವಿರಾಜಪೇಟೆ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 19-07-2025 ರಂದು ದೇವರಪುರ, ತಿತಿಮತಿ ಗ್ರಾಮ ನಿವಾಸಿ ಆರೋಪಿ ಪಂಜರಿಎರವರ ರವಿ, 42 ವರ್ಷ ಎಂಬಾತನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣಗಳ ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಶ್ರೀ ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

Exit mobile version