

28 ವರ್ಷಗಳಿಂದ ನಿರಂತರ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಹಾಲಿ ರಾಜ್ಯ ಕಾಂಗ್ರೆಸ್ ವಕ್ತಾರ ಸದ್ಯಅರಣ್ಯ ಮತ್ತು ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸಕ್ರಿಯ ರಾಜಕಾರಣದಿಂದ ಹೊರಗುಳಿದಿದ್ದು ರಾಜಕೀಯವಾಗಿ ಹತ್ತು ಹಲವು ಪ್ರಶ್ನೆಗಳು ಜನಸಾಮಾನ್ಯರಲ್ಲಿ ಕಾಡತೊಡಗಿದೆ.
ಸಾಮಾಜಿಕ ಕಳಕಳಿಯ ವಿಡಿಯೋ ವೈರಲ್ ಬಳಿಕ ಮೌನ:
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಂಕೇತ್ ಪೂವಯ್ಯ ಕೊಡಗಿನ ಸ್ಥಳೀಯ ದೃಶ್ಯವಾಹಿನಿಯ ಮೂಲಕ ಸಂವಿಧಾನ, ರಾಜಕೀಯ, ರಾಜಕಾರಣಿಗಳು, ಸೇವೆ ಮತ್ತು ಮತದಾರನ ಮಹತ್ವದ ಕುರಿತು ಹಲವು ವಿಡಿಯೋಗಳನ್ನು ಹಂತಹಂತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದರು. ವಿಡಿಯೋಗಳು ಸಮಾಜಕ್ಕೆ ಸಂದೇಶವನ್ನು ನೀಡಿತ್ತಾದರೂ ಅದರ ಬೆನ್ನಲ್ಲೇ ಶಾಸಕರೊಬ್ಬರ ತೇಜೋವದೆಯ ಆರೋಪಗಳು ಕೇಳಿ ಬಂದಿದ್ದವು. ಈ ಬೆಳವಣಿಗೆಯ ಮಧ್ಯೆಯೇ ಸಮಾಜ ಸೇವಕ ಸಂಕೇತ್ ಪೂವಯ್ಯ ಸಕ್ರೀಯ ರಾಜಕಾರಣ ಮತ್ತು ಸಾರ್ವಜನಿಕ ಜೀವನದಿಂದ ಕೊಂಚ ದೂರ ಉಳಿದ್ದಿದ್ದಾರೆ.
ಸಾರ್ವಜನಿಕ ವಲಯದಲ್ಲಿನ ಹೂಹಾಪೋಹಗಳೇನು?
ಸಂಕೇತ ಪೂವಯ್ಯ ಸಾಮಾಜಿಕ ಕಳಕಳಿಯುಳ್ಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಅವರ ಮಾತುಗಳಿಗೆ ಒಲವು ತೋರಿಸುತ್ತಿದ್ದರು. ಹೀಗಾಗಿ ಅವರಿಗೆ ಅವರದೇ ಪಕ್ಷದಿಂದ ಬೆದರಿಕೊಯೊಡ್ಡಿ ಸುಮ್ಮನಿರಲು ಸೂಚಿಸಲಾಗಿದೆಯೇ ಎಂಬ ಸಂಶಯ ಕೂಡ ಇಲ್ಲಿ ಸಾರ್ವಜನಿಕರನ್ನು ಕಾಡುತ್ತಿದೆ. ಮತ್ತೊಂದೆಡೆ ಯಾವುದೇ ಭ್ರಷ್ಟಾಚಾರವಿಲ್ಲದ ಸಂಕೇತ್ ಪೂವಯ್ಯ ಯಾವುದೇ ಬೆದರಿಕೆಗಳಿಗೆ ಬಗ್ಗದ ಮನೋಭಾವನೆಯುಳ್ಳವರು ಎಂಬ ಮಾತುಗಳು ಅವರ ಆತ್ಮೀಯ ವಲಯದಲ್ಲಿ ಹರಿದಾಡುತ್ತಿದೆ.
ಸಂಕೇತ್ ಜೆಡಿಎಸ್ ತೊರೆದು ಕೈ ಸೇರಿದ ಕಾರಣವೇನು?
2023 ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ನಲ್ಲಿದ್ದ ಸಂಕೇತ್ ಪೂವಯ್ಯ ಜಾತ್ಯತೀತ ಆಡಳಿತವನ್ನು ಗಟ್ಟಿಯಾಗಿಸಲು ಮತ ವಿಭಜನೆ ಆಗಬಾರದೆಂಬ ಚಿಂತನೆಯಿಂದ ಈಗಿನ ಶಾಸಕ ಪೊನ್ನಣ್ಣ ಅವರನ್ನು ವೈಯುಕ್ತಿಕವಾಗಿ ಬೆಂಬಲಿಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ತಾನು ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಯಾದರೆ ಜಾತ್ಯತೀತ ಮತಗಳು ತನಗೆ ಚಲಾವಣೆಯಾಗಿ ಕೈ ಅಭ್ಯರ್ಥಿಗೆ ಹಿನ್ನಡೆಯಾಗಬಹುದೆಂದು ಕೈ ಸೇರಿದ ಸಂಕೇತ್ ಪೂವಯ್ಯ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡ ಕೆಲವೇ ದಿನದಲ್ಲಿಯೇ ಕಾಂಗ್ರೆಸ್ ನ ರಾಜ್ಯ ಮಾದ್ಯಮ ವಕ್ತಾರರಾಗಿ ನೇಮಕಗೊಂಡರು.
ಬಡವರ ಕಣ್ಣೀರು ಒರೆಸಲು ಶಕ್ತಿ ಕೇಳಿದ ಸಂಕೇತ್:
2023 ರ ವಿಧಾನಸಭಾ ಚುನಾವಣೆ ಬಳಿಕ ಕೊಡಗಿನಲ್ಲಿ ನಿರಂತರವಾಗಿರುವ ಆನೆ ಮಾನವ ಸಂಘರ್ಷವನ್ನು ತಡೆಯಲು ತನಗೆ ಅಧಿಕಾರ ನೀಡಬೇಕೆಂಬ ಅಭಿಲಾಷೆ ಈ ಹಿಂದೆಯಿಂದ ಸಂಕೇತ್ ಅವರಿಗಿತ್ತು. ಇದೆ ಕಾರಣಕ್ಕಾಗಿ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಉನ್ನತ ಹುದ್ದೆಯನ್ನು ನೀಡುವಂತೆ ಕೋರಲಾಗಿತ್ತು. ಲಂಚ ಪಡೆಯುವ ಇಲಾಖೆ ಬಿಟ್ಟು ಬಡವರ ಜೊತೆಗಿದ್ದು ಅವರಿಗೆ ಪೂರಕವಾಗುವ ಅಧಿಕಾರವನ್ನು ಅವರು ಬಯಸಿದ್ದು ಹೌದೆಂದು ಅವರೇ ಹೇಳುತ್ತಾರೆ.
ಭ್ರಷ್ಟರ ಜೊತೆ ರಾಜಿ ಮಾಡಿಕೊಳ್ಳದ ಸಂಕೇತ್ ಪೂವಯ್ಯ:
ಶಾಸಕ ಪೊನ್ನಣ್ಣ ಅವರ ಕೈ ಬಲಪಡಿಸಲು ನಾನು ಜೆಡಿಎಸ್ ತೊರೆದೆ ಎಂದು ಹೇಳುವ ಸಂಕೇತ್ ಪೂವಯ್ಯ ಅವರ ಬದುಕಿನುದ್ದಕ್ಕೂ ಭ್ರಷ್ಟರ ಜೊತೆ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ. ಇದೆ ಕಾರಣಕ್ಕಾಗಿ ಹಲವರು ಅವರನ್ನು ವಿರೋಧಿಸುತ್ತಾರೆ ಈಗಲೂ. ತಪ್ಪು ಮಾಡಿ ಸಹಾಯ ಕೇಳುವ ಯಾವ ಕಾರ್ಯಕರ್ತರ ಪರವಾಗಿಯೂ ಸ್ಟೇಷನ್ ಹತ್ತದ ಪೂವಯ್ಯ ತಮ್ಮ ರಾಜಕೀಯ ಬದ್ಧತೆಯನ್ನು ಈ ಕ್ಷಣದವರೆಗೂ ಉಳಿಸಿಕೊಂಡಿದ್ದಾರೆ ಎಂದರು ಆಶ್ಚರ್ಯವೂ ಹೌದು ಅಭಿಮಾನವೂ ಹೌದು.
ನೂರಾರು ಕುಟುಂಬಗಳಿಗೆ ಧ್ವನಿಯಾದ ಸಂಕೇತ್
ಕೊಡಗಿನಲ್ಲಿ ನಿರಂತರವಾಗಿ ಮುಂದುವರೆದಿರುವ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಸಂಕೇತ್ ಪೂವಯ್ಯ ಕಳೆದ 28 ವರ್ಷಗಳಿಂದಲೂ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ದಾಳಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಿ ತನ್ನ ವೈಯುಕ್ತಿಕ ಆರ್ಥಿಕ ನೆರವನ್ನು ನೀಡಿರುವ ಸಂಕೇತ ಪೂವಯ್ಯ ಹಲವರಿಗೆ ಕಾನೂನು ಹೋರಾಟ ಮಾಡಲು ಉಚಿತ ಕಾನೂನು ಹೋರಾಟದ ನೆರವು ನೀಡಿದ್ದು ಇಲ್ಲಿ ಸ್ಮರಿಸಬಹುದು
ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲವೇ ಶಾಸಕ ಪೊನ್ನಣ್ಣ?
ಸಂಕೇತ್ ಪೂವಯ್ಯ ಮಾತಿನ ಪ್ರಕಾರ ಒಬ್ಬ ಕಳಂಕರಹಿತ ರಾಜಕಾರಣಿಯನ್ನು ಕ್ಷೇತ್ರಕ್ಕೆ ತರಬೇಕೆಂಬ ಆಸೆ ಇತ್ತು ಹಾಗಾಗಿ ಪೊನ್ನಣ್ಣ ಅವರಿಗೆ ಬೆಂಬಲವಾಗಿ ನಿಂತೇ ಎನ್ನುತ್ತಾರೆ. “ಆದರೆ ಚುನಾವಣೆಯ ಕೆಲ ಹಿಂದೆಯಷ್ಟೇ ಅವರು ನನಗೊಂದು ಭರವಸೆ ನೀಡಿದ್ದರು, ಸರಕಾರ ಬಂದ ತಕ್ಷಣ ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕಾಗಿ ಹೊಸ ಆಯೋಗವನ್ನು ರಚಿಸಿ ಅದರ ಮುಖ್ಯಸ್ಥನ್ನಾಗಿ ಮಾಡುತ್ತೇನೆಂದು” ಆದರೆ ಸರಕಾರ ಆಡಳಿತಕ್ಕೆ ಬಂದು ಮೂರು ವರ್ಷವಾದರೂ ಆಯೋಗ ರಚನೆ ಮಾಡಿಲ್ಲ ಎಂಬ ಅಸಮಾಧಾನ ಮತ್ತು ನೋವು ಸಂಕೇತ್ ಪೂವಯ್ಯ ಅವರನ್ನು ಕಾಡುತ್ತಿದೆ ಎಂದರೆ ತಪ್ಪಾಗಲಾರದು.
ಕಳಂಕರಹಿತ ರಾಜಕಾರಣಿಯ ಅವಶ್ಯಕತೆ ಕೊಡಗಿಗಿದೆ:
ಜೀವನದುದ್ದಕ್ಕೂ ಯಾವುದೇ ರಾಜಿ ಮಾಡಿಕೊಳ್ಳದ ಸಮಾಜ ಸೇವಕನೆಂದೇ ಪರಿಚಿತವಾಗಿರುವ ಮೇರಿಯಂಡ ಕುಟುಂಬದ ಸಂಕೇತ್ ಪೂವಯ್ಯ ಸದ್ಯ ಕೊಡಗಿನ ರಾಜಕೀಯದಲ್ಲಿ ಸಕ್ರಿಯರಾಗಬೇಕೆಂಬ ಕೂಗು ಕೂಡ ಇದೆ. ಉತ್ತಮ ಚಿಂತನೆ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಸಂಕೇತ್ ಪೂವಯ್ಯ ಅವರ ರಾಜಕೀಯ ಓಡಾಟ ಮತ್ತೆ ಮರುಕಳಿಸಲಿ ಎಂದು ಅವರ ಆತ್ಮೀಯ ವಲಯಗಳ ಅಭಿಪ್ರಾಯವಾಗಿದೆ.

