
ಯುವಕರ ಮಧ್ಯೆ ಛಾಪು ಮೂಡಿಸುತ್ತಿರುವ ಯುವ ರಾಜಕಾರಣಿ; ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಚರ್ಚೆಗೆ ಬಂದ ಪ್ರಸನ್ನ ಗೌಡ
ಕೊಡಗಿನ ರಾಜಕೀಯದಲ್ಲಿ ಹೊಸ ತಲೆಮಾರಿನ ನಾಯಕತ್ವದ ಹುಡುಕಾಟ ಮುಂದುವರಿದಿರುವ ಬೆನ್ನಲ್ಲೇ, ಯುವ ಮುಖವೊಂದು ನಿಧಾನವಾಗಿ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿದೆ. ಅದು ಎಡಿಕೇರಿ ಪ್ರಸನ್ನ ಗೌಡ.
ಮೂಲತಃ ಕೊಡಗಿನ ನಾಪೋಕ್ಲು ಸಮೀಪದ ಬಲ್ಲಮಾವಟ್ಟಿ ಗ್ರಾಮದವರಾದ ಪ್ರಸನ್ನ ಗೌಡ, ಅರೆಭಾಷೆ ಗೌಡ ಸಮುದಾಯದ ವಿದ್ಯಾವಂತ ಯುವ ರಾಜಕಾರಣಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಲೀಡಿಂಗ್ ಎಡ್ಜ್ ಎಂಬ ಜಾಹೀರಾತು ಸಂಸ್ಥೆಯ ಮೂಲಕ ಉದ್ಯಮ ಕ್ಷೇತ್ರದಲ್ಲಿರುವ ಅವರು, ರಾಜಕೀಯದಲ್ಲೂ ಸಕ್ರಿಯವಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷೆ; ಹತ್ತಾರು ಲೆಕ್ಕಾಚಾರ
ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಪ್ರಸನ್ನ ಗೌಡ, ಮುಂಬರುವ ದಿನಗಳಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಬಿಜೆಪಿಯ ಬಳ್ಳಾರಿ ಪಾದಯಾತ್ರೆ ಸೇರಿದಂತೆ ಪಕ್ಷದ ವಿವಿಧ ಹೋರಾಟ ಹಾಗೂ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅವರು, ಸಂಘಟನೆ ಮತ್ತು ಸಾರ್ವಜನಿಕ ಸಂಪರ್ಕದ ಮೂಲಕ ತಮ್ಮದೇ ಆದ ನೆಲೆ ರೂಪಿಸಿಕೊಳ್ಳುತ್ತಿದ್ದಾರೆ.
ಹಬ್ಬ, ಕ್ರೀಡೆ, ಹಿಂದೂ ಸಂಸ್ಕೃತಿ ಕಾರ್ಯಕ್ರಮಗಳಿಗೆ ಬೆಂಬಲ
ರಾಜಕೀಯದ ಹೊರತಾಗಿಯೂ ಸಾಮಾಜಿಕ ಚಟುವಟಿಕೆಗಳ ಮೂಲಕ ಪ್ರಸನ್ನ ಗೌಡ ಗಮನ ಸೆಳೆಯುತ್ತಿದ್ದಾರೆ.
ಈ ಬಾರಿಯ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಕೊಡಗಿನ ವಿವಿಧೆಡೆ ನೂರಾರು ಗಣೇಶ ಮಂಟಪಗಳಿಗೆ ಆರ್ಥಿಕ ಸಹಕಾರ ನೀಡಿರುವುದು ಅವರ ಸಾಮಾಜಿಕ ಚಟುವಟಿಕೆಗಳಲ್ಲೊಂದು ಪ್ರಮುಖ ಅಂಶವಾಗಿದೆ.
ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ನಿರಂತರವಾಗಿ ಆರ್ಥಿಕ ನೆರವು ನೀಡುತ್ತಿರುವ ಅವರು, ಕೊಡಗಿನ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ವಿವಿಧ ಕ್ರೀಡೆಗಳಿಗೆ ಸಹಕಾರ ನೀಡುತ್ತಿದ್ದಾರೆ.
ಅರೆಭಾಷೆ ಗೌಡ ಸಮುದಾಯದಲ್ಲಿ ಹೊಸ ಭರವಸೆ
ಕೊಡಗಿನ ರಾಜಕೀಯದಲ್ಲಿ ಅರೆಭಾಷೆ ಗೌಡ ಸಮುದಾಯಕ್ಕೆ ಭವಿಷ್ಯದ ನಾಯಕತ್ವದ ಕೊರತೆಯ ಚರ್ಚೆ ಆಗಾಗ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಯುವ, ವಿದ್ಯಾವಂತ ಹಾಗೂ ಉದ್ಯಮ ಹಿನ್ನೆಲೆಯ ಪ್ರಸನ್ನ ಗೌಡ ಅವರ ರಾಜಕೀಯ ಸಕ್ರಿಯತೆ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಕೆ.ಜಿ. ಬೋಪಯ್ಯ ಅವರ ಬಳಿಕ ಅರೆಭಾಷೆ ಗೌಡ ಸಮುದಾಯವನ್ನು ರಾಜಕೀಯವಾಗಿ ಸಕ್ರಿಯವಾಗಿ ಪ್ರತಿನಿಧಿಸುವ ಹೊಸ ತಲೆಮಾರಿನ ನಾಯಕತ್ವದ ಅಗತ್ಯವಿದೆ ಎಂಬ ಚರ್ಚೆಯ ನಡುವೆಯೇ ಪ್ರಸನ್ನ ಗೌಡ ಅವರ ಹೆಸರು ಮುನ್ನೆಲೆಗೆ ಬರುತ್ತಿದೆ.
ವಿರೋಧಗಳ ನಡುವೆಯೂ ಮುನ್ನಡೆ
ರಾಜಕೀಯ ಪ್ರವೇಶದ ಆರಂಭದಲ್ಲೇ ಎಲ್ಲರ ಬೆಂಬಲ ದೊರೆಯುವುದು ಸುಲಭವಲ್ಲ. ಪ್ರಸನ್ನ ಗೌಡ ಅವರ ರಾಜಕೀಯ ಚಟುವಟಿಕೆಗಳಿಗೂ ಕೆಲವು ವಿರೋಧಗಳು ಎದುರಾಗಿವೆ ಎನ್ನಲಾಗುತ್ತಿದೆ. ಆದರೂ ಅವುಗಳ ನಡುವೆಯೂ ತಮ್ಮ ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಸಾಗುತ್ತಿದ್ದಾರೆ.
ಅಲ್ಲದೆ ಯುವಕರೊಂದಿಗೆ ಸಂಪರ್ಕ, ಸಾಮಾಜಿಕ ಚಟುವಟಿಕೆಗಳು, ಕ್ರೀಡೆಗೆ ಪ್ರೋತ್ಸಾಹ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಂಬಲ ಮತ್ತು ಬಿಜೆಪಿಯಲ್ಲಿನ ಸಕ್ರಿಯ ಭಾಗವಹಿಸುವಿಕೆ—ಇವೆಲ್ಲವೂ ಪ್ರಸನ್ನ ಗೌಡ ಅವರ ರಾಜಕೀಯ ಪಯಣಕ್ಕೆ ಪೂರಕವಾಗುತ್ತಿವೆ ಎಂದರೆ ತಪ್ಪಾಗಲಾರದು.
ಕೊಡಗಿನ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯುವ ನಾಯಕತ್ವಕ್ಕೆ ಎಷ್ಟು ಅವಕಾಶ ಸಿಗಲಿದೆ? ಬಿಜೆಪಿಯಲ್ಲಿ ಪ್ರಸನ್ನ ಗೌಡ ಅವರಿಗೆ ಯಾವ ರೀತಿಯ ಜವಾಬ್ದಾರಿ ಅಥವಾ ಅವಕಾಶ ದೊರೆಯಲಿದೆ? ಅರೆಭಾಷೆ ಗೌಡ ಸಮುದಾಯದ ಹೊಸ ರಾಜಕೀಯ ಮುಖವಾಗಿ ಅವರು ಬೆಳೆಯಲಿದ್ದಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ದಿನಗಳ ರಾಜಕೀಯ ಬೆಳವಣಿಗೆಗಳೇ ಉತ್ತರ ನೀಡಬೇಕಿದೆ.

