ಕೊಡವ ಭಾಷೆ 8ನೇ ಪರಿಚ್ಛೇದಕ್ಕೆ ಶೀಘ್ರ ಸೇರ್ಪಡೆ ಆಗುವಂತಾಗಲಿ:ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ
ಕೊಡವ ತಕ್ಕ್ ಎಳ್ತ್’ಕಾರಡ ಕೂಟದ 196 ನೇ ಹೆಜ್ಜೆಯ “ಕನ್ಯಾರ್ ಕವನ” ಪುಸ್ತಕ ಬಿಡುಗಡೆ
ಕೊಡವ ಭಾಷೆಯ ಸಾಹಿತ್ಯ ಬೆಳವಣಿಗೆಯಾಗುತ್ತಿರುವ ವೇಗ ನೋಡಿದರೆ ಕೊಡವ ಭಾಷೆ ಭಾರತ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರುವ ದಿನ ದೂರವಿಲ್ಲ ಎನಿಸುತ್ತಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವ ತಕ್ಕ್ ಎಳ್ತ್’ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ‘ಕೂಟ’ ಕೊಡವ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಮಾಡಿದ ಸೇವೆ ಹಾಗೂ ಸಾಧನೆಗಳ ಮಾಹಿತಿ ನೀಡುತ್ತಾ ಕೊಡವರಿಗೆ ಎಡಮ್ಯಾರ್’ನಿಂದ ಮೀನ್ಯಾರ್’ವರೆಗೆ ಅವರದೇ ಆದ ತಿಂಗಳ ಪ್ರತ್ಯೇಕ ಹೆಸರುಗಳಿದ್ದು, ಎಲ್ಲಾ ತಿಂಗಳುಗಳೂ ಈ ಮಣ್ಣಿಗೆ, ಕ್ರಷಿಗೆ, ಕೊಡವರ ಹಬ್ಬಗಳಿಗೆ ಹಾಗೂ ಕೊಡವರ ಬದುಕಿನೊಂದಿಗೆ ಮಿಳಿತಗೊಂಡಿರುವುದಲ್ಲದೆ, ಕೊಡಗಿನ ಪ್ರಕ್ರತಿಯೂ ಇದಕ್ಕೊಪ್ಪುವ ರೀತಿಯ ಬದಲಾವಣೆ ಕಾಣುತ್ತದೆ. ಇದೆಲ್ಲವನ್ನೂ ನಮ್ಮ ಯುವ ಪೀಳಿಗೆಗೆ ಅರ್ಥೈಸುವ ರೀತಿಯ ಸಾಹಿತ್ಯ ಬಳುವಳಿ ನೀಡುವ ಉದ್ದೇಶದಿಂದ ಪ್ರತೀ ಕೊಡವ ತಿಂಗಳ ಹೆಸರಿನಲ್ಲಿ ವಿವಿಧ ಲೇಖಕರಿಂದ ಬರಹಗಳನ್ನು ಆಹ್ವಾನಿಸಿ ಪುಸ್ತಕ ಹೊರತರಲಾಗುತ್ತಿದೆ. ಈಗಾಗಲೇ ಕಕ್ಕಡ ಹಾಗೂ ಕನ್ಯಾರ್ ತಿಂಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ.ಇಂದು ಪುತ್ತರಿ ಹಬ್ಬದ ನೆನಪಿಗಾಗಿ ಪುತ್ತರಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಆಹ್ವಾನಿಸುವ ಕೊಡವ ತಿಂಗಳು ಹಾಗೂ ಕೊಡವರ ಹಬ್ಬಗಳ ಬಗೆಗಿನ ಲೇಖನಗಳನ್ನು ಎಲ್ಲರೂ ಕಳುಹಿಸಿ ಪುಸ್ತಕ ಪ್ರಕಟಣೆಗೆ ಸಹಕರಿಸಬೇಕೆಂದು ಕೋರಿದರು.
‘ಕೂಟ’ದ 196ನೆ ಪುಸ್ತಕ “ಕನ್ಯಾರ್ ಕವನ” ಬಿಡುಗಡೆ ಮಾಡಿ ಮಾತನಾಡಿದ ಕವಿಗೋಷ್ಠಿಯ ದತ್ತಿನಿಧಿ ಪ್ರಾಯೋಜಕಿ ಮೂಕಳೆರ ಟೈನಿ ಪೂಣಚ್ಚರವರು ಕೊಡವ ಭಾಷೆಯ ಬೆಳವಣಿಗೆಯಾಗಬೇಕಾದರೆ ಕೊಡವ ಭಾಷೆಯಲ್ಲಿ ಹೆಚ್ಚು ಸಾಹಿತ್ಯ ಪುಸ್ತಕ ಹೊರತರುವುದರೊಂದಿಗೆ ಎಲ್ಲರೂ ಕೊಡವ ಭಾಷೆಯಲ್ಲೇ ಮಾತನಾಡಬೇಕು. ಪೋಷಕರು ಮಕ್ಕಳೊಂದಿಗೆ ಕೊಡವ ಭಾಷೆಯಲ್ಲೇ ಮಾತನಾಡಬೇಕೆಂದು ಕರೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನ ನಿರ್ದೇಶಕಿ ಮನ್ನೇರ ಸರಸ್ವತಿ ರಮೇಶ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸುವುದರೊಂದಿಗೆ ಕೊಡವ ಭಾಷೆಯಲ್ಲಿ ಪ್ರಕಟವಾದ ಪುಸ್ತಕಗಳನ್ನು ಎಲ್ಲರೂ ಓದಿ ಲೇಖಕರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಮತ್ತಷ್ಟು ಸಾಹಿತ್ಯ ಪುಸ್ತಕಗಳು ಪ್ರಕಟವಾಗಲು ಸಹಕರಿಸಬೇಕೆಂದರು.
‘ಕೂಟ’ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಪ್ರಾರ್ಥಿಸಿ, ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ ಸ್ವಾಗತಿಸಿ ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿ, ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ವಂದಿಸಿದರು. ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ ಕವಿಗಳಿಗೆ ಮಾನ್ಯತೆ ಪತ್ರ ವಿತರಿಸಿದರು.ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಪರದಂಡ ಸುಬ್ರಮಣಿ ಕಾವೇರಪ್ಪ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

