ಮಡಿಕೇರಿ : ಜನವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಬಡವರ ಆರೋಗ್ಯದ ಮೇಲೂ ಸವಾರಿ ಮಾಡುತ್ತಿದ್ದು, ದೇಶದ ಜನಪ್ರಿಯ ಜನೌಷಧಿ ಕೇಂದ್ರಗಳನ್ನು ರಾಜ್ಯದಲ್ಲಿ ಮುಚ್ಚುವಂತೆ ಆದೇಶ ಹೊರಡಿಸಿರುವುದು ಸಿದ್ದರಾಮಯ್ಯನವರ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿ.ಕೆ ಲೋಕೇಶ್ ಆರೋಪಿಸಿದ್ದಾರೆ.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭ ಮಾತನಾಡಿದ ಅವರು, ರಾಜ್ಯದ ರಸ್ತೆಗಳೆಲ್ಲವೂ ಹದಗೆಟ್ಟಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹಳ್ಳ ಹಿಡಿದಿದೆ. ಈ ಸಂದರ್ಭ ಸಾಧನೆ ಸಮಾವೇಶ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿಲುವಿಗೆ ಧಿಕ್ಕಾರವಿದೆ ಎಂದು ಕಿಡಿಕಾರಿದರು.
ಜನ ಸಾಮಾನ್ಯರ ಮೇಲೆ ಪದೇ ಪದೇ ಸವಾರಿ ಮಾಡುತ್ತಿರುವ ರಾಜ್ಯ ಸರ್ಕಾರ ಸೇಡಿನ ರಾಜಕೀಯ ಮಾಡುವ ದುರುದ್ದೇಶದಿಂದಾಗಿ, ಬಡವರಿಗೆ ಕಡಿಮೆ ದರಕ್ಕೆ ದೊರೆಯುತ್ತಿರುವ ಜನಔಷಧಿ ಕೇಂದ್ರ ಮುಚ್ಚುವ ನಿರ್ಧಾರಕ್ಕೆ ಬಂದಿದೆ. ರಾಜ್ಯದ ಪ್ರತಿಯೊಬ್ಬರು ಕೂಡಾ ಇದರ ವಿರುದ್ಧ ಧ್ವನಿ ಎತ್ತುತಿದ್ದಾರೆ. ಹಾಗಾಗಿ ಕೂಡಲೇ ಜನಔಷದಿ ಕೇಂದ್ರಗಳನ್ನು ಮುಚ್ಚುವಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸತೀಶ್, ಸಿದ್ದಾಪುರ ಶಕ್ತಿಕೇಂದ್ರದ ಪ್ರಮುಖರಾದ ರೂಪೇಶ್, ದಿಜಿತ್, ಅನಿಲ್ ಶೆಟ್ಟಿ, ಹರಿದಾಸ್, ರೀನಾ ತುಳಸಿ ಮತ್ತು ಇತರರಿದ್ದರು.


