ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
98.2% ಅಂಕ; 9.72 CGPA ಗಳಿಸಿ ಅಮೋಘ ಸಾಧನೆ — MCA ವ್ಯಾಸಂಗಕ್ಕೆ ಪ್ರವೇಶ
ಮಡಿಕೇರಿ: ಅಂತಿಮ ವರ್ಷದ BCA (Bachelor of Computer Applications) ಪದವಿ ಪರೀಕ್ಷೆಯಲ್ಲಿ ಮೇಕೇರಿ ಗ್ರಾಮದ ಕುಮಾರಿ ಇಂಪನ ಕೆ.ಡಿ. ಅವರು ಶೇ.98.2ರಷ್ಟು ಅಂಕಗಳೊಂದಿಗೆ 9.72 CGPA ಗಳಿಸಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಇಂಪನ ಅವರು ಮೇಕೇರಿ ಗ್ರಾಮದ ನಿವೃತ್ತ ಸರ್ಕಾರಿ ನೌಕರ ಧರ್ಮಲಿಂಗ ಹಾಗೂ ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತುಳಸಿ ದಂಪತಿಯ ಪುತ್ರಿ. ಕಠಿಣ ಪರಿಶ್ರಮ, ಪೋಷಕರ ನಿರಂತರ ಪ್ರೋತ್ಸಾಹ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ.
ಇಂಪನ ಅವರು ಮಡಿಕೇರಿಯ ಸೈಂಟ್ ಜೋಸೆಫ್ ವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 89.7% ಹಾಗೂ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 97.33% ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದರು.
ಪ್ರಸ್ತುತ ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ MCA ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ಇಂಪನ, ಮುಂದಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗುವ ಗುರಿ ಹೊಂದಿದ್ದಾರೆ.
ಇಂಪನ ಅವರ ಸಾಧನೆ ಮೇಕೇರಿ ಗ್ರಾಮಕ್ಕೆ ಹೆಮ್ಮೆ ತಂದಿದ್ದು, ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿದೆ. ಅವರ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಬದುಕು ಯಶಸ್ವಿಯಾಗಲಿ ಎಂದು ಗ್ರಾಮಸ್ಥರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.

