ಕುಶಾಲನಗರ: ಜಾತ್ರೆ ಮೈದಾನದ ಗುಡಿಸಲು ನಿವಾಸಿಗಳ ನೆರವಿಗೆ ಧಾವಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ದಾನಿಗಳ ಸಹಕಾರದೊಂದಿಗೆ ಎಂಟು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ಹಾಗೂ ತರಕಾರಿ ಕಿಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.
ಕುಶಾಲನಗರದ ಜಾತ್ರೆ ಮೈದಾನದಲ್ಲಿ ಕಳೆದ 18–20 ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಈ ಕುಟುಂಬಗಳು ದಿನಗೂಲಿ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿವೆ. ಅತ್ಯಂತ ಕಡುಬಡತನದಲ್ಲಿ ಬದುಕುತ್ತಿರುವ ಕುಟುಂಬಗಳ ಸಂಕಷ್ಟ ಅರಿತ ಕರವೇ ಸ್ವಾಭಿಮಾನಿ ಸೇನೆ, ದಾನಿಗಳ ಸಹಕಾರದೊಂದಿಗೆ ಆಹಾರ ಸಾಮಗ್ರಿ ಮತ್ತು ತರಕಾರಿ ಕಿಟ್ಗಳನ್ನು ವಿತರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಳೆದ ಎರಡು ದಶಕಗಳಿಂದ ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ನೆರವು ನೀಡುತ್ತಿರುವುದು ಸಂತಸ ತಂದಿದೆ. ನಿಜವಾದ ನಿರ್ಗತಿಕರಿಗೆ ನೆರವಿನ ಹಸ್ತ ಚಾಚುವುದು ಸಂಘಟನೆಯ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ಬಡವರ ಕಲ್ಯಾಣಕ್ಕಾಗಿ ಸಂಘಟನೆಯಿಂದ ನೆರವು ಕೋರಿದಾಗಲೆಲ್ಲ ತಕ್ಷಣ ಸ್ಪಂದಿಸುತ್ತಿರುವ ಕೂಪರ್ ಎಸ್ಟೇಟ್ ಮಾಲೀಕ ನಿಶಾಂತ್ ಅವರನ್ನು ಫ್ರಾನ್ಸಿಸ್ ಡಿಸೋಜ ಇದೇ ವೇಳೆ ವಿಶೇಷವಾಗಿ ಸ್ಮರಿಸಿ, ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಆಹಾರ ಕಿಟ್ ಪಡೆದ ಗುಡಿಸಲು ನಿವಾಸಿಯೊಬ್ಬರು ಮಾತನಾಡಿ, ದಿನನಿತ್ಯದ ಊಟಕ್ಕೂ ಕಷ್ಟಪಡುತ್ತಿದ್ದ ನಮಗೆ ಈ ನೆರವು ಬಹಳಷ್ಟು ಸಂತಸ ತಂದಿದೆ. ನಮ್ಮ ಕಷ್ಟವನ್ನು ಅರಿತು ತಾವಾಗಿಯೇ ಬಂದು ಆಹಾರ ಸಾಮಗ್ರಿ ನೀಡಿದ ಕರವೇ ಸ್ವಾಭಿಮಾನಿ ಸೇನೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಗೌರವಾಧ್ಯಕ್ಷ ನಂಜಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ಶಿವು, ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರ, ತಾಲೂಕು ಉಪಾಧ್ಯಕ್ಷ ನಾಸಿರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಭವ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಖಾಸಿಂ, ರಾಜ್ಯೋತ್ಸವ ಖಜಾಂಜಿ ಅಂತೋನಿ, ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ದಿವ್ಯ ಡಿಸೋಜ, ತಾಲೂಕು ಗೌರವಾಧ್ಯಕ್ಷೆ ನಾಗರತ್ನ, ತಾಲೂಕು ಸಂಚಾಲಕ ವಿ.ಪಿ. ಚಂದ್ರಶೇಖರ್, ವಿಲ್ಸನ್, ಚಂದ್ರು, ಡ್ಯಾನಿಯಲ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

