ನಿಗದಿತ ಮಿತಿಮೀರಿಸಿ ಮರದ ದಿಮ್ಮಿ ಸಾಗಾಟ: 5 ಲಾರಿ ವಶ, ₹2.97 ಲಕ್ಷ ದಂಡ
ಕುಶಾಲನಗರ: ಆರ್.ಸಿ. ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಾ, ನಿಗದಿತ ಎತ್ತರ ಹಾಗೂ ಉದ್ದಳತೆಯ ಮಿತಿಯನ್ನು ಮೀರಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಐದು ಲಾರಿಗಳನ್ನು ಕುಶಾಲನಗರ ಟ್ರಾಫಿಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುಶಾಲನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ತಪಾಸಣೆ ವೇಳೆ ನಿಯಮ ಉಲ್ಲಂಘಿಸಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ಪತ್ತೆಹಚ್ಚಲಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ಹಾಗೂ ವಾಹನಗಳ ನಿಗದಿತ ಮಿತಿಗಳನ್ನು ಮೀರಿ ಸರಕು ಸಾಗಣೆ ಮಾಡಿರುವ ಹಿನ್ನೆಲೆಯಲ್ಲಿ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡ ಐದು ಲಾರಿಗಳ ವಿರುದ್ಧ ನಿಯಮಾನುಸಾರ ಪ್ರಾದೇಶಿಕ ಸಾರಿಗೆ ಕಚೇರಿ (RTO) ಮೂಲಕ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು ₹2,97,000 ದಂಡ ವಿಧಿಸಲಾಗಿದೆ.
ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಾಲನೆ ವೇಳೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಗಣೆ ಮಾಡುವ ವಾಹನಗಳ ವಿರುದ್ಧ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

