
ಕುಶಾಲನಗರ: ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ಆಗ್ರಹಿಸಿ ಬಿಜೆಪಿ ಕುಶಾಲನಗರ ವಲಯದ ವತಿಯಿಂದ ಇಂದು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ, ನಿನ್ನೆ ರಾಜ್ಯ ಸರ್ಕಾರ ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವ ಹಿನ್ನೆಲೆಯಲ್ಲಿ, ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಸರ್ಕಾರವನ್ನು “ದಿವಾಳಿ ಸರ್ಕಾರ” ಎಂದು ಟೀಕಿಸಿದ ಪ್ರತಿಭಟನಾಕಾರರು, ಸಾಂಕೇತಿಕವಾಗಿ ಖಾಲಿ ಚೆಂಬುಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಬರಪರಿಹಾರ ಹಾಗೂ ರೈತರ ಸಮಸ್ಯೆಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಮಾಜಿ ಎಂಎಲ್‌ಸಿ ಎಸ್.ಎಲ್.ಜಿ. ಮೇದಪ್ಪ ಸೇರಿದಂತೆ ಬಿಜೆಪಿ ಪ್ರಮುಖರಾದ ಭಾರತೀಶ್, ಗೌತಮ್, ಚಂದ್ರಶೇಖರ, ರಕ್ಷಿತ್ ಮಾವಾಜಿ, ಮಹೇಶ್ ಜೈನಿ, ರವಿ ಕಾಳಪ್ಪ, ವಿ.ಕೆ. ಲೋಕೇಶ್ ಹಾಗೂ ಭಾಸ್ಕರ ನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.

