ಮಡಿಕೇರಿ ದಸರಾ ಅ.21ಕ್ಕೆ ನಡೆಸಲು ತೀರ್ಮಾನ!: ವಿಜಯದಶಮಿ ದಿನವೇ ದಶಮಂಟಪಗಳ ಶೋಭಾಯಾತ್ರೆ?
ಮಡಿಕೇರಿ ದಸರಾವನ್ನು ವಾಡಿಕೆಯಂತೆ ವಿಜಯದಶಮಿ ದಿನದಂದೇ ಆಚರಿಸಲು ತೀರ್ಮಾನಿಸಲಾಗಿದೆ. ಅಕ್ಟೋಬರ್ 21ರಂದು ದಶಮಂಟಪಗಳ ಶೋಭಾಯಾತ್ರೆ ನಡೆಸಲು ನಿರ್ಧರಿಸಲಾಗಿದ್ದು, ಈ ಕುರಿತು ನಾಳೆ ಸಮಿತಿಯಿಂದ ಅಧಿಕೃತ ಹೇಳಿಕೆ ಹೊರಬೀಳುವ ಸಾಧ್ಯತೆ ಇದೆ.
ನಾಲ್ಕು ಕರಗ ಸಮಿತಿಗಳ ಉಪಸ್ಥಿತಿಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೊಡಗು ನ್ಯೂಸ್ಗೆ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಕರಗ ಸಮಿತಿಯಿಂದ ಅಕ್ಟೋಬರ್ 20ರಂದು ದಶಮಂಟಪಗಳ ಶೋಭಾಯಾತ್ರೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ವಿಜಯದಶಮಿ ದಿನದಂದೇ ದಸರಾ ಆಚರಿಸುವ ವಾಡಿಕೆಯನ್ನು ಮುಂದುವರಿಸಬೇಕೆಂದು ಹಲವು ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ದಿನಾಂಕ ಬದಲಾವಣೆ ಕುರಿತು ಶಾಸಕ ಡಾ. ಮಂತರ್ ಗೌಡ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ಮಡಿಕೇರಿ ನಗರದ ಹಲವು ಹಿರಿಯ ಗಣ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ ಎಂದಿನಂತೆ ವಿಜಯದಶಮಿ ದಿನದಂದೇ ದಸರಾ ಜನೋತ್ಸವ ನಡೆಸುವ ಬಗ್ಗೆ ಚರ್ಚೆ ನಡೆದು, ಅಕ್ಟೋಬರ್ 21ರಂದು ದಶಮಂಟಪಗಳ ಶೋಭಾಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಮೈಸೂರು ಹಾಗೂ ಮಂಗಳೂರು ದಸರಾಗಳಂತೆ ಮಡಿಕೇರಿ ದಸರಾವನ್ನೂ ವಿಜಯದಶಮಿ ದಿನದಂದೇ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಿತಿ ಮೂಲಗಳು ತಿಳಿಸಿವೆ.
ಸುದ್ದಿಯನ್ನು ಕದ್ದು ಪತ್ರಕರ್ತರಾಗಬೇಡಿ
ಕೊಡಗು ನ್ಯೂಸ್ ಬಳಗ

