


₹5,500ರಿಂದ ₹9,000ಕ್ಕೆ ಏರಿದ ವಸೂಲಿ ಆರೋಪ – ಮಧ್ಯರಾತ್ರಿ ಚೆಕ್ಪೋಸ್ಟ್ ಭೇಟಿ ಹಲವು ಅನುಮಾನಗಳಿಗೆ ಕಾರಣ
ವಿರಾಜಪೇಟೆ: ಕೆಂಪುಕಲ್ಲು ಸಾಗಿಸುವ ಲಾರಿಗಳ ವಿಚಾರವಾಗಿ ನಡೆಯುತ್ತಿದೆ ಎನ್ನಲಾದ ಹಣದಾಟ ಇದೀಗ ವಿರಾಜಪೇಟೆ ಭಾಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಪ್ರತಿ ಲಾರಿಗೆ ನಿಗದಿಯಾಗಿತ್ತು ಎನ್ನಲಾದ ₹5,500 ಮೊತ್ತವನ್ನು ₹9,000ಕ್ಕೆ ಏರಿಸುವಲ್ಲಿ ‘ಸಿಂಗಲ್ ಸ್ಟಾರ್’ ಅಧಿಕಾರಿಯೊಬ್ಬರ ಪಾತ್ರವಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಮುಖಂಡ ಹಾಗೂ ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಸ್ಥಳೀಯ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಸ್ವತ ಅವರೇ ಈ ಸಿಂಗಲ್ ಸ್ಟಾರ್ ಅಧಿಕಾರಿಯ ಬಗ್ಗೆ ಕೆಲವು ಸಂಶಯದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೆ ಈ ವಿಡಿಯೋ ಆ ಸಿಂಗಲ್ ಸ್ಟಾರ್ ಅಧಿಕಾರಿಯ ಡಬ್ಬಲ್ ಗೇಮ್ ನಿಂದಲೇ ವೈರಲ್ ಆಗಿದೆಯೆಂದು ಅನುಮಾನ ವ್ಯಕ್ತವಾಗಿದೆ.
ಇದರ ನಡುವೆ ಸಂಬಂಧಿತ ಅಧಿಕಾರಿ ಮಧ್ಯರಾತ್ರಿ ಚೆಕ್ಪೋಸ್ಟ್ಗೆ ಭೇಟಿ ನೀಡಿರುವ ವಿಚಾರವೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾಮಾನ್ಯ ಕರ್ತವ್ಯದ ಸಮಯವನ್ನು ಹೊರತುಪಡಿಸಿ ಮಧ್ಯರಾತ್ರಿಯಲ್ಲಿ ಚೆಕ್ಪೋಸ್ಟ್ಗೆ ಭೇಟಿ ನೀಡುವ ಅಗತ್ಯವೇನಿತ್ತು? ಆ ವೇಳೆ ಯಾರನ್ನು ಭೇಟಿ ಮಾಡಲಾಗಿತ್ತು? ಯಾವ ಉದ್ದೇಶಕ್ಕಾಗಿ ಈ ಭೇಟಿ ನಡೆದಿತ್ತು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಕೆಂಪುಕಲ್ಲು ಲಾರಿಗಳ ಸಂಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿದೆ ಎನ್ನಲಾದ ಅಕ್ರಮ ಹಣ ವಸೂಲಿ ವ್ಯವಸ್ಥೆಯ ಹಿಂದೆ ಯಾರು ಇದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಕೇವಲ ಕೆಂಪುಕಲ್ಲು ಸಾಗಾಟ ಮಾತ್ರವಲ್ಲದೆ, ಗಡಿ ಭಾಗದ ಚೆಕ್ಪೋಸ್ಟ್ಗಳ ಮೂಲಕ ನಿಷೇಧಿತ ಮಾದಕ ವಸ್ತುಗಳ ಸಾಗಾಟಕ್ಕೂ ಕೆಲವರ ಸಹಕಾರವಿದೆಯೇ ಎಂಬ ಅನುಮಾನಗಳ ಬಗ್ಗೆಯೂ ತನಿಖೆಯಾಗಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಹಿಂದೆ ವಿರಾಜಪೇಟೆ ಪೊಲೀಸ್ taaಣಾ ವ್ಯಾಪ್ತಿಯಲ್ಲಿ ಕೇಳಿಬಂದಿದ್ದ ಅಕ್ರಮ ಸ್ಪಾ ಪ್ರಕರಣ ಹಾಗೂ ಗಾಂಜಾ ದಂಧೆಯಲ್ಲೂ ಈ ಅಧಿಕಾರಿಯ ಮೇಲೆ ಗಂಭೀರ ಆರೋಪಗಳ ಕೇಳಿ ಬಂದಿತ್ತು ಎನ್ನಲಾಗಿದೆ. ಹಲವು ಸಂದರ್ಭಗಳಲ್ಲಿ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಆರೋಪದಲ್ಲಿ ಇದೇ ‘ಸಿಂಗಲ್ ಸ್ಟಾರ್’ ಅಧಿಕಾರಿಯ ಹೆಸರು ಪ್ರಸ್ತಾಪವಾಗಿತ್ತು ಎನ್ನಲಾಗುತ್ತಿದ್ದು, ಹಳೆಯ ಆರೋಪಗಳು ಮತ್ತು ಈಗ ಕೇಳಿಬರುತ್ತಿರುವ ಹೊಸ ಅನುಮಾನಗಳ ನಡುವಿನ ಸಂಬಂಧದ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
₹5,500 ಇದ್ದ ಮೊತ್ತ ದಿಢೀರ್ ₹9,000ಕ್ಕೆ ಹೇಗೆ ಏರಿತು? ಈ ಹೆಚ್ಚುವರಿ ಹಣ ಯಾರ ಜೇಬಿಗೆ ಸೇರುತ್ತಿದೆ? ಇದರ ಹಿಂದಿರುವ ಸೂತ್ರಧಾರ ಯಾರು? ಮಧ್ಯರಾತ್ರಿ ಚೆಕ್ಪೋಸ್ಟ್ಗೆ ಭೇಟಿ ನೀಡಿದ ರಹಸ್ಯವೇನು? ಎಂಬ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉತ್ತರ ನೀಡಬೇಕಾಗಿದೆ. ಅಲ್ಲದೆ ಘಟನೆ ನಡೆದ ಮರುದಿನ ನನ್ನದೇನು ಪಾತ್ರವಿಲ್ಲ ಎಂದು ಕಾಂಗ್ರೆಸ್ ಮುಖಂಡರ ಮನೆಗೆ ಸಿಂಗಲ್ ಸ್ಟಾರ್ ಅಧಿಕಾರಿ ಹೋಗಿದ್ದಾರೆ ಎಂಬ ಖಚಿತ ಮಾಹಿತಿಯೂ ಲಭ್ಯವಾಗಿದ್ದು ಈ ಬಗ್ಗೆಯೂ ತನಿಖೆ ಅವಶ್ಯವಾಗಿದೆ.
ಈ ಎಲ್ಲಾ ಆರೋಪಗಳು ಮತ್ತು ಅನುಮಾನಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆದರೆ ಮಾತ್ರ ಸತ್ಯ ಹೊರಬರಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

