ಮಾಲ್ದಾರೆ ಗ್ರಾಮದಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ; ಗ್ರಾಮಸ್ಥರಲ್ಲಿ ನಿಟ್ಟುಸಿರು
ಮಾಲ್ದಾರೆ: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಗದ್ದೆ ಜಯಾ ಅವರ ತೋಟದಲ್ಲಿ ಆ.6ರಂದು ಚಿರತೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದ್ದು, ಆ.7ರಂದು ಶುಕ್ರವಾರ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಕುಶಾಲನಗರ ವಲಯ, ಆನೆಚೌಕೂರು ವಲಯ ಹಾಗೂ ತಿತಿಮತಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಆರ್ಆರ್ಟಿ ತಂಡದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿರತೆ ಸೆರೆ ಸಿಕ್ಕಿರುವುದರಿಂದ ಮಾಲ್ದಾರೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಮುಂದೆ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಯಾವುದೇ ಆತಂಕವಿಲ್ಲದೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

