ಕೊಡಗಿನಲ್ಲಿ ‘ಜೆನ್-ಜಿ’ ರಾಜಕೀಯ ಸಮರ: ನೀಟ್ ಪ್ರತಿಭಟನೆಗೆ ಮುನ್ನ ವಾಟ್ಸಪ್‌ನಲ್ಲಿ ಟಾಕ್ ವಾರ್
ಸುರೇಶ್ ಬಿಳಿಗೇರಿ
ಮಡಿಕೇರಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಶನಿವಾರ ನಡೆಯಲಿರುವ ಪ್ರತಿಭಟನೆಗೆ ಮುನ್ನ ಕೊಡಗು ಜಿಲ್ಲೆಯ ವಿದ್ಯಾರ್ಥಿ ರಾಜಕೀಯ ವಲಯದಲ್ಲಿ ವಾತಾವರಣ ಕಾವೇರಿದೆ. ಎಬಿವಿಪಿ (ABVP) ಹಾಗೂ ಎನ್‌ಎಸ್‌ಯುಐ (NSUI) ಕಾರ್ಯಕರ್ತರ ನಡುವೆ ‘ವಾಯ್ಸ್ ಆಫ್ ಯೂತ್ ಕೊಡಗು’ ಎಂಬ ವಾಟ್ಸಪ್ ಬಳಗದಲ್ಲಿ ನಡೆಯುತ್ತಿರುವ ವಾಕ್ಸಮರ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಪ್ರತಿಭಟನೆಗೆ ಸಂಬಂಧಿಸಿದ ವಾಟ್ಸಪ್ ಗುಂಪಿನ ಜಾಯಿನ್ ಲಿಂಕ್ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ಅದರ ಮೂಲಕ ಹಲವರು ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಇದರಿಂದ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿದ್ದು, ಪರ-ವಿರೋಧ ಅಭಿಪ್ರಾಯಗಳು ಹಾಗೂ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ.
ಒಂದೆಡೆ, “ಪ್ರತಿ ವಿಷಯಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾಕೆ ಗುರಿಯಾಗಿಸುತ್ತೀರಿ?” ಎಂದು ಎಬಿವಿಪಿ ಪ್ರಶ್ನಿಸುತ್ತಿದ್ದರೆ, ಮತ್ತೊಂದೆಡೆ, “ಪಕ್ಷದ ಚೌಕಟ್ಟನ್ನು ಬಿಟ್ಟು ವಿದ್ಯಾರ್ಥಿಗಳ ಹಿತಕ್ಕಾಗಿ ಹೋರಾಟಕ್ಕೆ ಬನ್ನಿ” ಎಂದು ಎನ್‌ಎಸ್‌ಯುಐ ತಿರುಗೇಟು ನೀಡುತ್ತಿದೆ. ಈ ಟಾಕ್ ವಾರ್ ವಿದ್ಯಾರ್ಥಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಬುಧವಾರ ಸಂಜೆಯಿಂದಲೇ ವಾಟ್ಸಪ್ ಬಳಗದಲ್ಲಿ ಚರ್ಚೆಗಳು ತೀವ್ರಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯವೂ ಈ ಬೆಳವಣಿಗೆಗಳನ್ನು ಕುತೂಹಲ ಹಾಗೂ ಆತಂಕದಿಂದ ಗಮನಿಸುತ್ತಿದೆ. ವಿದ್ಯಾರ್ಥಿ ಸಂಘಟನೆಗಳ ಮುಂದಿನ ನಡೆ ಏನಿರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಏನಿದು ‘ವಾಯ್ಸ್ ಆಫ್ ಯೂತ್ ಕೊಡಗು’?
2023ರಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಹಾಗೂ ಹೋರಾಟಗಳಿಗೆ ವೇದಿಕೆಯಾಗುವ ಉದ್ದೇಶದಿಂದ ಪ್ರತಾಪ್ ಎಂಬ ಯುವಕ ಈ ವಾಟ್ಸಪ್ ಬಳಗವನ್ನು ಆರಂಭಿಸಿದ್ದರು. ಸದ್ದಿಲ್ಲದೆ ಬೆಳೆದ ಈ ಬಳಗ ಇದೀಗ ಜಿಲ್ಲೆಯ ರಾಜಕೀಯ ಹಾಗೂ ವಿದ್ಯಾರ್ಥಿ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ವಿವಿಧ ಇಲಾಖೆಗಳು ಹಾಗೂ ತನಿಖಾ ಸಂಸ್ಥೆಗಳ ಗಮನವನ್ನೂ ಸೆಳೆದಿದೆ ಎನ್ನಲಾಗುತ್ತಿದೆ.
ಪರ-ವಿರೋಧ ಚರ್ಚೆ ತಾರಕಕ್ಕೆ
ಬಳಗದಲ್ಲಿ ಬೆರಳೆಣಿಕೆಯ ಯುವಕ-ಯುವತಿಯರ ನಡುವಿನ ಚರ್ಚೆಗಳು ದಿನದಿಂದ ದಿನಕ್ಕೆ ತೀವ್ರವಾಗುತ್ತಿವೆ. ಕೆಲವರು “ರಾಜಕೀಯವನ್ನು ಬದಿಗಿಟ್ಟು ವಿದ್ಯಾರ್ಥಿಗಳ ಹಿತಕ್ಕಾಗಿ ಹೋರಾಟ ನಡೆಸೋಣ” ಎಂದು ಕರೆ ನೀಡುತ್ತಿದ್ದರೆ, ಇನ್ನೂ ಕೆಲವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಕೆಲವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಡುತ್ತಾ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ, “ಹೋರಾಟದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸಲಾಗುತ್ತಿದೆ” ಎಂದು ಎಬಿವಿಪಿ ಗಂಭೀರ ಆರೋಪ ಮಾಡಿದೆ. ಇದಕ್ಕೆ ಪ್ರತಿಯಾಗಿ ಎನ್‌ಎಸ್‌ಯುಐ, “ಈ ವಿಚಾರಕ್ಕೆ ಪಕ್ಷ ಹಾಗೂ ಜಾತಿಯ ಬಣ್ಣ ಬಳಿಯದೆ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು” ಎಂದು ಪ್ರತಿಕ್ರಿಯಿಸಿದೆ.
ವಿಶೇಷವೆಂದರೆ, ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ಕೂಡ ಈ ಬಳಗಕ್ಕೆ ಸೇರಿಕೊಂಡು ವಿದ್ಯಾರ್ಥಿಗಳ ನಡುವಿನ ಚರ್ಚೆಗಳನ್ನು ಸದ್ದಿಲ್ಲದೆ ಗಮನಿಸುತ್ತಿರುವುದು ಕಂಡುಬಂದಿದೆ.
ಬಳಗದ ಮೇಲೆ ಪೊಲೀಸರ ನಿಗಾ
ಮೂಲಗಳ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯ ಸಂದೇಶಗಳು, ಪ್ರಚೋದನಾತ್ಮಕ ಪೋಸ್ಟ್‌ಗಳು ಅಥವಾ ಯಾವುದೇ ಅಹಿತಕರ ಬೆಳವಣಿಗೆಗಳು ನಡೆಯದಂತೆ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ ಎನ್ನಲಾಗಿದೆ.
ಶನಿವಾರ ನಡೆಯಲಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿ ಹಾಗೂ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಚುರುಕುಗೊಂಡಿದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.

