ಮಂಡ್ಯ ವಿರುದ್ಧ 3-0 ಭರ್ಜರಿ ಜಯ; ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕೊಡಗು ತಂಡ

ಅಶೋಕ್_ಮಡಿಕೇರಿ
ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಜಿಲ್ಲಾ ಮಟ್ಟದ ಫುಟ್‌ಬಾಲ್ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಮತ್ತೊಂದು ಅದ್ಭುತ ಪ್ರದರ್ಶನ ನೀಡಿ ಮಂಡ್ಯ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೊಡಗು ತಂಡವು ಮಂಡ್ಯ ತಂಡಕ್ಕೆ ಯಾವುದೇ ಅವಕಾಶ ನೀಡದೆ ಸಂಪೂರ್ಣ ಮೇಲುಗೈ ಸಾಧಿಸಿತು. ತಂಡದ ನಾಯಕ ವಿಜು ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ನಂತರ ದಿವಾಕರ್ ಮತ್ತು ಸಬಿತ್ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವನ್ನು ಮತ್ತಷ್ಟು ಭದ್ರಪಡಿಸಿದರು.
ತಂಡದ ನಾಯಕ ವಿಜು ಅವರ ಸಮರ್ಥ ನಾಯಕತ್ವ, ಆಟಗಾರರ ಸಂಘಟಿತ ಪ್ರದರ್ಶನ ಹಾಗೂ ತರಬೇತಿ ಸಿಬ್ಬಂದಿಯ ಮಾರ್ಗದರ್ಶನದಿಂದ ಕೊಡಗು ತಂಡವು ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ತಂಡದ ಮುಖ್ಯ ಕೋಚ್ ಜಗದೀಶ್ ಪಾಣತಲೆ, ಸಹಾಯಕ ಕೋಚ್ ದೀಪು ಮಾಚ್ಚಯ್ಯ ಹಾಗೂ ತಂಡದ ವ್ಯವಸ್ಥಾಪಕ ದರ್ಶನ್ ಸುಕುಮಾರ್ ಅವರ ಮಾರ್ಗದರ್ಶನದಲ್ಲಿ ಕೊಡಗು ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಮುಂದಿನ ಪಂದ್ಯದಲ್ಲಿಯೂ ಇದೇ ಪ್ರದರ್ಶನ ಮುಂದುವರಿಸಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ವ್ಯಕ್ತವಾಗಿದೆ.
ಕೊಡಗು ತಂಡದ ಈ ಭರ್ಜರಿ ಗೆಲುವಿಗೆ ಜಿಲ್ಲೆಯ ಕ್ರೀಡಾಭಿಮಾನಿಗಳು, ಫುಟ್‌ಬಾಲ್ ಪ್ರೇಮಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದು, ಸೆಮಿಫೈನಲ್ ಪಂದ್ಯಕ್ಕೂ ಶುಭ ಹಾರೈಸಿದ್ದಾರೆ.

