ಹೊಸತೋಟದಲ್ಲಿ ಪ್ರಸನ್ನ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ
ಸ್ವತಃ ರಕ್ತದಾನ ಮಾಡಿ ಇತರರಿಗೆ ಮಾದರಿಯಾದ ಎಡಿಕೇರಿ ಪ್ರಸನ್ನ
ಹೊಸತೋಟ, ಅ.12: ರಕ್ತದಾನದಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಹೊಸತೋಟ ಗ್ರಾಮದಲ್ಲಿ ಎಡಿಕೇರಿ ಪ್ರಸನ್ನ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಡಿಕೇರಿ ವೈದ್ಯಕೀಯ ಕಾಲೇಜಿನ ರಕ್ತನಿಧಿ ವಿಭಾಗದ ಡಾ. ಕರುಂಬಯ್ಯ ಅವರು ರಕ್ತದಾನದ ಮಹತ್ವ ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ರಕ್ತದಾನವು ಅಗತ್ಯವಿರುವವರಿಗೆ ಜೀವದಾನ ನೀಡುವ ಮಹತ್ಕಾರ್ಯವಾಗಿದ್ದು, ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಡಿಕೇರಿ ಪ್ರಸನ್ನ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾದರು. ಇದೇ ವೇಳೆ ಮಾತನಾಡಿದ ಅವರು, ರಕ್ತದಾನದ ಮಹತ್ವವನ್ನು ಅರಿತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲು ಶ್ರಮಿಸಿದ ಹೊಸತೋಟದ ರಾಜೇಶ್ ಹಾಗೂ ಹರೀಶ್ ಅವರನ್ನು ಅಭಿನಂದಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಸ್ನೇಹಿತರು ಹಾಗೂ ಗ್ರಾಮದ ಜನತೆಗೆ ಪ್ರಸನ್ನ ಅವರು ಕೃತಜ್ಞತೆ ಸಲ್ಲಿಸಿದರು.
ಈ ಮಹತ್ಕಾರ್ಯಕ್ಕೆ ಸಹಕರಿಸಿದ ಮಡಿಕೇರಿ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ರಕ್ತನಿಧಿ ವಿಭಾಗದ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಲಾಯಿತು.


