ಮಡಿಕೇರಿ ದಸರಾದಲ್ಲಿ ರಾತ್ರಿ 10ರ ಬಳಿಕ ಡಿಜೆ ಮೊಳಗಿದರೆ ನ್ಯಾಯಾಂಗ ನಿಂದನೆ ಪ್ರಕರಣ: ಅಮೃತೇಶ್ ಎಚ್ಚರಿಕೆ

ಡಿಜೆ ಶಬ್ದಕ್ಕೆ ಸಮಯ ಮಿತಿ ವಿಧಿಸಲು ಜಿಲ್ಲಾಧಿಕಾರಿಗೆ ಮನವಿ

ಮಡಿಕೇರಿ: ಮಡಿಕೇರಿ ದಸರಾ ಉತ್ಸವದಲ್ಲಿ ರಾತ್ರಿ 10 ಗಂಟೆಯ ಬಳಿಕ ಡಿಜೆ ಬಳಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೈಕೋರ್ಟ್ ವಕೀಲ ಅಮೈತೇಶ್ ಎಚ್ಚರಿಕೆ ನೀಡಿದ್ದಾರೆ.

ದಸರಾ ಉತ್ಸವದಲ್ಲಿ ಡಿಜೆ ಬಳಕೆಗೆ ಸಮಯ ಮಿತಿ ವಿಧಿಸಿ, ನ್ಯಾಯಾಲಯದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ತಾವು ಒತ್ತಾಯಿಸುತ್ತಿಲ್ಲ. ಬದಲಾಗಿ, ಡಿಜೆಯಿಂದ ಉಂಟಾಗುವ ಶಬ್ದ ಮಾಲಿನ್ಯವನ್ನು ನಿಯಂತ್ರಿಸಿ, ಶಬ್ದದ ತೀವ್ರತೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿರುವುದಾಗಿ ಅಮೈತೇಶ್ ತಿಳಿಸಿದ್ದಾರೆ.

ವಿರಾಜಪೇಟೆ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ದುರಂತಗಳು ಹಾಗೂ ಅತಿಯಾದ ಶಬ್ದದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯ ಗಮನ ಸೆಳೆದಿರುವುದಾಗಿ ಅವರು ಹೇಳಿದ್ದಾರೆ.

ರಾತ್ರಿ 10 ಗಂಟೆಯ ಬಳಿಕ ಡಿಜೆ ಬಳಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿರುವ ಅವರು, ಅತಿಯಾದ ಡಿಜೆ ಶಬ್ದ ಮತ್ತು ಲೇಸರ್ ಲೈಟ್‌ಗಳಿಂದ ಆಸ್ಪತ್ರೆಗಳಲ್ಲಿರುವ ರೋಗಿಗಳು, ಹಿರಿಯ ನಾಗರಿಕರು ಹಾಗೂ ಸಾಕುಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಈ ವಿಚಾರಗಳನ್ನು ಹೈಕೋರ್ಟ್‌ನ ಗಮನಕ್ಕೂ ತಂದಿರುವುದಾಗಿ ತಿಳಿಸಿದ್ದಾರೆ.

ಈ ಬಾರಿಯ ಮಡಿಕೇರಿ ದಸರಾದಲ್ಲಿ ರಾತ್ರಿ 10 ಗಂಟೆಯ ಬಳಿಕ ಡಿಜೆ ಬಳಕೆ ಮುಂದುವರಿಸಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸುವುದಾಗಿ ಅಮೈತೇಶ್ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ, ಹಲವು ವರ್ಷಗಳಿಂದ ಶಬ್ದ ಮಾಲಿನ್ಯದ ವಿರುದ್ಧ ಹೋರಾಟ ನಡೆಸುತ್ತಿರುವ ಮಡಿಕೇರಿಯ ಹಿರಿಯ ವಕೀಲ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

Exit mobile version