ಅರೆಭಾಷಿಕ ಯುವಜನಾಂಗಕ್ಕೆ ಪೂಜಾರಿರ ಮೊಣ್ಣಪ್ಪ ಮಾದರಿ: ಡಾ. ಕಾವೇರಿಮನೆ ಬೋಜಪ್ಪ
ಮಡಿಕೇರಿ, ಅ.12: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರೆಭಾಷಿಕ ಗೌಡ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ ಪೂಜಾರಿರ ಮೊಣ್ಣಪ್ಪ ಅವರು ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂದು 97 ವರ್ಷದ ಹಿರಿಯರಾದ ಡಾ. ಕಾವೇರಿಮನೆ ಬೋಜಪ್ಪ ಹೇಳಿದರು.
ಬೆಂಗಳೂರಿನ ಚೌಡೇಶ್ವರಿ ನಗರದ ‘ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ’ದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಗೌಡ ಸಮಾಜಗಳ ಸಹಯೋಗದಲ್ಲಿ ಆಯೋಜಿಸಿದ್ದ ಪೂಜಾರಿರ ಮೊಣ್ಣಪ್ಪ ಅವರ ಸ್ಮರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊಣ್ಣಪ್ಪ ಅವರು ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ದುಡಿದ ಅಪರೂಪದ ವ್ಯಕ್ತಿತ್ವದ ಸಾಧಕರಾಗಿದ್ದು, ಅವರ ಸ್ಮರಣ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ನಿವೃತ್ತ ಜಂಟಿ ನಿರ್ದೇಶಕ ನಂಗಾರು ನಾಣಯ್ಯ ಮಾತನಾಡಿ, ಬೆಂಗಳೂರಿನ ಲಗ್ಗೇರೆ, ಜಕ್ಕೂರು ಹಾಗೂ ಶ್ರೀಗಂಧ ಕಾವಲು ಪ್ರದೇಶಗಳಲ್ಲಿ ಸುಮಾರು 18 ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಅರೆಭಾಷಿಕ ಗೌಡರಿಗೆ ನಿವೇಶನ ದೊರಕಿಸಿಕೊಡುವಲ್ಲಿ ಮೊಣ್ಣಪ್ಪ ಶ್ರಮಿಸಿದ್ದರು ಎಂದು ಸ್ಮರಿಸಿದರು.
ಹಿರಿಯ ಸಾಹಿತಿ ಹೊದ್ದೆಟ್ಟಿ ಭವಾನಿಶಂಕರ್ ಅವರು ಮೊಣ್ಣಪ್ಪ ಅವರ ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜಮುಖಿ ಸೇವೆಯನ್ನು ಸ್ಮರಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ನಂಗಾರು ನಿಂಗರಾಜು, ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಹಾಗೂ ಕೊಡಗು ಗೌಡ ಸಮಾಜದ ಅಧ್ಯಕ್ಷ ಪಾಣತಲೆ ಪಳಂಗಪ್ಪ ಮಾತನಾಡಿ, ಅವರ ಆದರ್ಶಗಳನ್ನು ಯುವಜನಾಂಗ ಅನುಸರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಅರೆಭಾಷಿಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರು, ಗಣ್ಯರು ಹಾಗೂ ಮೊಣ್ಣಪ್ಪ ಅವರ ಪುತ್ರ ಪೂಜಾರಿರ ಗಣೇಶ್ ಉಪಸ್ಥಿತರಿದ್ದರು. ಸಾಧಕರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

